Advertisement
ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಮೂವರು ಅಸುನೀಗಿದ್ದರೆ, 9 ಮಂದಿ ಗಾಯಗೊಂಡಿದ್ದಾರೆ.ಇದೇ ವೇಳೆ, ಚಾಮರಾಜನಗರ ಜಿಲ್ಲೆ ಹನೂರು ಸಮೀಪ ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಯುವಕನನ್ನು ರಕ್ಷಿಸಲಾಗಿದೆ. ಅಲ್ಲದೆ, ಕೋಲಾರ ಸಮೀಪದ ಕೋರ್-ಇನ್ ಶಾಲೆ ಜಲಾವೃತಗೊಂಡಿದ್ದು, ಶಾಲೆಯೊಳಗಡೆ ಸಿಕ್ಕಿಹಾಕಿಕೊಂಡಿದ್ದ 100 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಹಲವೆಡೆ ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
Related Articles
ಚಾಮರಾಜನಗರ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸಿದ್ದು, ಹನೂರು ಸಮೀಪದ ಉಡುತೊರೆಹಳ್ಳದಲ್ಲಿ ಮಂಗಳವಾರ ಸಂಜೆ ಕೊಚ್ಚಿಹೋಗುತ್ತಿದ್ದ ರುದ್ರ (21) ಎಂಬ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿನ ನಂದನವನ, ಮಜ್ಜನದ ಬಾವಿ, ತೆಪ್ಪೋತ್ಸವದ ದೊಡ್ಡಕೆರೆ, ಚಿಕ್ಕಕೆರೆಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಬುಧವಾರ ಬೆಳಗಿನ ಅಭಿಷೇಕದ ಪೂಜೆಗಾಗಿ ಸಾಲೂರು ಬೃಹನ್ಮಠದಿಂದ ನೀರು ತರಲಾಯಿತು. ಇದೇ ವೇಳೆ, ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ 7 ಮಂದಿ ಗಾಯಗೊಂಡಿದ್ದಾರೆ.
Advertisement
100 ಮಕ್ಕಳ ರಕ್ಷಣೆ:ಈ ಮಧ್ಯೆ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೋಲಾರ ತಾಲೂಕಿನ ಕೋರ-ಇನ್ ಶಾಲೆಗೆ ಬುಧವಾರ ನೀರು ನುಗ್ಗಿದ್ದು, ಬೋಟ್‌ಗಳ ಸಹಾಯದಿಂದ ಶಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಬೇತಮಂಗಲ ಸಮೀಪದ ಪೋತರಾಜನಹಳ್ಳಿ ಗ್ರಾಮದ ಬಳಿ ಇರುವ ಎಟಿಬಿ ಇಟ್ಟಿಗೆ ಕಾರ್ಖಾಣೆಯ ಚಿಮಣಿ ಕುಸಿದು ಬಿದ್ದಿದ್ದು, ಅಂದಾಜು 8 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ಇದೇ ವೇಳೆ, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಾರ್ಗೋನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಮನೆಯ ಗೋಡೆ ಕುಸಿದು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.ಮೈಸೂರಿನಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಪ್ಪಣ್ಣ ಪಾರ್ಕ್‌ನಲ್ಲಿ ನೆರೆಯ ನೀರಿನೊಂದಿಗೆ ಮೊಸಳೆಯೊಂದು ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಅದನ್ನು ಸೆರೆ ಹಿಡಿದರು. ಇದೇ ವೇಳೆ, ಚಿಕ್ಕಬಳ್ಳಾಪುರ, ಶಿರಸಿ, ಉಡುಪಿ, ಮಡಿಕೇರಿ, ಮಂಗಳೂರು ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.