ಪೆರ್ಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ವ್ಯಾಪಕ ನಾಶ ನಷ್ಟ ಸಂಭವಿಸಿದೆ.ಮರ ಬಿದ್ದು ವಿದ್ಯುತ್ ಕಂಬಗಳ ಮುರಿತ,ತಂತಿ ಕಡಿತ,ರಸ್ತೆ ತಡೆ, ಕೃಷಿ ಪ್ರದೇಶಗಳಿಗೆ ಹಾನಿ,ಮನೆ ಕುಸಿತ ಮೊದಲಾದವುಗಳು ವರದಿಯಾಗಿವೆ.ಕೆಲವು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಂಬ,ತಂತಿಗಳಿಗೆ ಹಾನಿಯಾಗಿದ್ದರಿಂದ ಕತ್ತಲೆಯಲ್ಲಿಯೇ ಇರುವಂತಾಗಿದೆ.
ಎಣ್ಮಕಜೆ ಗ್ರಾ.ಪಂ.ಅಡ್ಕಸ್ಥಳದಲ್ಲಿ ವೇಗ ವಾಗಿ ಬೀಸಿದ ಗಾಳಿಮಳೆಗೆ ಅಡ್ಕಸ್ಥಳದ ಆನಂದ ನಾಯ್ಕ ಅವರ ಮನೆಗೆ ಅಂಡಿ ಪುನರ್ ಮರ ಬಿದ್ದು ಮನೆ ಛಾವಣಿಯ ಸಿಮೆಂಟ್ ಶೀಟ್ ಮುರಿದು ಬಿದ್ದಿದೆ. ರಭಸವಾಗಿ ಬೀಸಿದ ಗಾಳಿಗೆ ಸಮೀಪದ ನಾರಾಯಣ ನಾಯ್ಕ ಅವರ ಮನೆ ಮಾಡಿಗೆ ಹಾನಿಯಾಗಿದೆ.
ಸ್ವರ್ಗ ಭಾಗದಲ್ಲಿ ಗಾಳಿಮಳೆಗೆ ಸ್ವರ್ಗ-ವಾಣೀನಗರ ರಸ್ತೆ ಬದಿಯ ಬೃಹತ್ ಸಾಗುವಾನಿ ಮರ ವಿದ್ಯುತ್ ತಂತಿಗಳಿಗೆ ಅಪ್ಪಳಿಸಿ ಮಾರ್ಗಕ್ಕೆ ಅಡ್ಡವಾಗಿ ಬಿದ್ದಿದೆ. ವಿದ್ಯುತ್ ಕಂಬ ಮುರಿದಿದ್ದು ಸ್ವರ್ಗದಲ್ಲಿ ಕಾರ್ಯಾಚರಿಸುತ್ತಿರುವ ಎಣ್ಮಕಜೆ ಪಂ. ಮೃಗಾಸ್ಪತ್ರೆ ಉಪಕೇಂದ್ರದ ಕಟ್ಟಡಕ್ಕೆ ಮಗುಚಿ ಛಾವಣಿಗೆ ಲಘು ಹಾನಿಯಾಗಿದೆ. ರಸ್ತೆಯಲ್ಲಿ ವಾಹನ ಸಂಚಾರದ ಸಮಯದಲ್ಲಿಯೇ ಮರ ಬಿದ್ದಿದ್ದು ಕೂದಳೆಲೆಯ ಅಂತರದಲ್ಲಿ ಭಾರೀ ಅಪಾಯದಿಂದ ಪಾರಾಗಿದ್ದಾರೆ. ತಾಸುಗಳ ಕಾಲ ರಸ್ತೆ ತಡೆ ಉಂಟಾಗಿದ್ದು ಸ್ಥಳೀಯರ ನೇತೃತ್ವದಲ್ಲಿ ಮರವನ್ನು ತೆರವು ಗೊಳಿಸಿ ವಾಹನ ಸಂಚಾರ ಸುಗಮ ಗೊಳಿಸಲಾಯಿತು.
ಪೆರ್ಲ ವಿದ್ಯುತ್ ಇಲಾಖೆ ಸಿಬಂದಿ ಗಂಟೆಗಳ ಕಾಲ ಕಾರ್ಯಾಚರಿಸಿ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಿದ್ದಾರೆ.
ಸ್ವರ್ಗ ಸಮೀಪದ ಮೊಳಕ್ಕಾಲು ರಸ್ತೆಗೆ ಅಡ್ಡವಾಗಿ ಹಲಸಿನ ಮರ ಮುರಿದು ಬಿದ್ದಿದೆ. ರಭಸದ ಗಾಳಿಮಳೆಗೆ ಮೊಳಕ್ಕಾಲು ವೀರಪ್ಪ ಗೌಡ ಅವರ ಸುಮಾರು 20ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿದ್ದು ವ್ಯಾಪಕ ಕೃಷಿ ನಾಶ ಉಂಟಾಗಿದೆ.