Advertisement

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

01:53 AM Oct 08, 2024 | Team Udayavani |

ಉಡುಪಿ: ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಸಂಜೆ-ರಾತ್ರಿ ಧಾರಾಕಾರ ಮಳೆಯ ಜತೆಗೆ ಗುಡುಗು, ಸಿಡಿಲು ಜನ ಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ. ತಗ್ಗು ಪ್ರದೇಶದಲ್ಲಿ ನೀರು ನಿಂತು ಸಮಸ್ಯೆ ಉಂಟಾಯಿತು.

Advertisement

ರವಿವಾರ ಪಶ್ಚಿಮಘಟ್ಟದ ತಪ್ಪಲು ಆಗುಂಬೆ ಭಾಗದಲ್ಲಿ ಮೇಘನ್ಪೋಟ ರೀತಿಯಲ್ಲಿ ಮಳೆ ಸುರಿದ ಪರಿಣಾಮ ಹೆಬ್ರಿ ಸುತ್ತಮುತ್ತಲಿನ ಪರಿಸರದಲ್ಲಿ ಧಾರಾಕಾರ ಮಳೆಯಾಗಿತ್ತು. ಇದೇ ರೀತಿ ಉಡುಪಿ, ಮಣಿಪಾಲ ಸುತ್ತಮುತ್ತಲೂ ರಾತ್ರಿ 7.30ರಿಂದ 10 ಗಂಟೆವರೆಗೆ ಮಳೆ ಬಂದಿದೆ.

ನಿರಂತರ ಗುಡುಗು, ಸಿಡಿಲಿನ ಪರಿಣಾಮ ಜನರು ಬೆಚ್ಚಿ ಬಿದ್ದಿದ್ದು, ಹಲವೆಡೆ ಮನೆಗಳಲ್ಲಿ ವಿದ್ಯುತ್‌ ಪರಿಕರಗಳಿಗೆ ಹಾನಿ ಸಂಭವಿಸಿದೆ. ಒಂದು ಗಂಟೆಗೂ ಅಧಿಕ ನಿರಂತರ ಮಳೆ ಸುರಿದ ಪರಿಣಾಮ ಚರಂಡಿ ತುಂಬಿ ರಸ್ತೆಯ ಮೇಲೆ ನದಿಯಂತೆ ನೀರು ಹರಿದಿದೆ. ಸಂಜೆ ವೇಳೆ ಮನೆಯಿಂದ ಹೊರಗಡೆ ಹೋದವರು, ಕಚೇರಿ ಕಾರ್ಯ ಮುಗಿಸಿ ಮನೆಗೆ ಹೋಗುತ್ತಿರುವವರು ಮಳೆಯಲ್ಲಿ ಸಿಲುಕಿದ್ದು, ಮಾತ್ರವಲ್ಲದೆ ಗುಡುಗು, ಸಿಡಿಲಿಗೆ ನಲುಗಿ ಹೋಗಿದ್ದರು.

ಗಾಳಿ, ಸಿಡಿಲಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಹಠಾತ್‌ ಸುರಿದ ಮಳೆಯಿಂದಾಗಿ ರಾತ್ರಿ ಹೆದ್ದಾರಿ ಸಹಿತ ನಗರದ ಮುಖ್ಯರಸ್ತೆಯಲ್ಲಿಯೂ ಟ್ರಾಫಿಕ್‌ ಜಾಮ್‌ ಉಂಟಾಗಿ ಸುಗಮ ಸಂಚಾರಕ್ಕೆ ತೊಡಕುಂಟಾಗಿತ್ತು.

ನಿರೀಕ್ಷೆಯೇ ಇರಲಿಲ್ಲ
ಕೆಲವು ದಿನದಿಂದ ಮಳೆ ಇಲ್ಲದೇ ಇರುವುದರಿಂದ ಈ ರೀತಿ ಒಂದೇ ದಿನ ಇಷ್ಟು ಮಳೆ ಸುರಿಯಬಹುದು ಎಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಅಲ್ಲದೆ, ಹವಾಮಾನ ಇಲಾಖೆಯಿಂದಲೂ ಮುನ್ಸೂಚನೆ ಇರಲಿಲ್ಲ. ಕೆಲವು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯು ಅಲ್ಲಲ್ಲಿ ಸಣ್ಣಪುಟ್ಟ ಹಾನಿಯನ್ನು ಉಂಟು ಮಾಡಿದೆ. ಒಟ್ಟಾರೆ ಸೋಮವಾರ ರಾತ್ರಿ ಸುರಿದ ಭಾರೀ ಮಳೆ ಜನರನ್ನು ಕಂಗೆಡಿಸಿದೆ.

Advertisement

ಕುಂದಾಪುರ, ಕಾರ್ಕಳ ಸುತ್ತಮುತ್ತಲೂ ತಡರಾತ್ರಿ ಗುಡುಗು ಸಹಿತ ಬಿಟ್ಟುಬಿಟ್ಟು ಮಳೆ ಸುರಿದಿದೆ. ಉಡುಪಿ ಸಹಿತ ಹಲವೆಡೆ ಬೆಳಗ್ಗೆನಿಂದ ಸಂಜೆವರೆಗೆ ಬಿಸಿಲು-ಮೋಡ ಕವಿದ ವಾತಾವರಣವಿದ್ದು, ಸಂಜೆ ಅನಂತರ ಬಿರುಸಿನ ಮಳೆ ಆರಂಭಗೊಂಡಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ರಾತ್ರಿ 7ರ ಅನಂತರ ಮಳೆ ಸುರಿಯಲಾರಂಬಿಸಿತು. ದ.ಕ.ದ ಪುತ್ತೂರು, ಸುಳ್ಯ ಸಹಿತ ವಿವಿಧೆಡೆ ತುಂತುರು ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next