Advertisement
ಗಾಳಿ ಮಳೆಗೆ ತಾಲೂಕಿನ ವಿವಿಧ ಭಾಗಗಳಲ್ಲಿ ಮನೆ ಹಾಗೂ ಕೃಷಿಗೆ ಹಾನಿಯಾಗಿವೆ. ರೆಂಜಾಳದಲ್ಲಿ ರವಿವಾರ ಸಂಜೆ ಬಿರುಗಾಳಿ ಸಹಿತ ಗುಡುಗು ಮಿಂಚು ಮಳೆಯಾಗಿದೆ. ಮಳೆಗೆ ರೆಂಜಾಳ ಮಹಾಲಕ್ಷ್ಮೀ ನಗರದ ಗೀತಾ ನಿವಾಸದ ನಾರಾಯಣ ವಿ. ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮನೆಯಿಂದ ದೂರದಲ್ಲಿದ್ದ ಬೃಹತ್ ಮರವೊಂದು ಸುಳಿಗಾಳಿಗೆ ಸಿಕ್ಕಿ ಮನೆಯ ಮೇಲ್ಛಾವಣಿಯ ಪಾರ್ಶ್ವದ ಮೇಲೆ ಬಿದ್ದಿದ್ದು ಅಡುಗೆ ಕೊಠಡಿ ಸಂಪೂರ್ಣ ಹಾನಿಯಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ನಾರಾಯಣ ಶೆಟ್ಟಿಯ ಸಹಿತ ನಾಲ್ವರು ಮನೆಯಲ್ಲಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಹಾನಿಯಾಗಿದ್ದು ಕಾಂಪೌಂಡ್ ಸಂಪೂರ್ಣವಾಗಿ ಧರೆಗುರುಳಿದೆ. ಬಿರುಗಾಳಿಗೆ ಸಿಲುಕಿ ಸುಮಾರು ಹತ್ತಕ್ಕಿಂತಲೂ ಅಧಿಕ ಫಸಲು ಭರಿತ ಅಡಿಕೆ ಮರಗಳು ಧರಾಶಾಹಿಯಾಗಿವೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಕೂಡ ಮಳೆಯಾದ ಬಗ್ಗೆ ವರದಿಯಾಗಿದ್ದು, ಮಳೆಗೆ ಸಣ್ಣಪುಟ್ಟ ಹಾನಿಗಳಾಗಿರುವ ಘಟನೆ ನಡೆದಿದೆ. ರಸ್ತೆಗೆ ಹರಿದ ನೀರು
ಕಾರ್ಕಳ ನಗರದ ಮುಖ್ಯ ಪೇಟೆಯಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಸಣ್ಣ ಮಳೆ ಬಂದರೂ ರಸ್ತೆ ಮೇಲೆಯೇ ನೀರು ಹರಿದು ಹೋಗುತ್ತಿದೆ. ಸೋಮವಾರವೂ ರಸ್ತೆ ಮೇಲೆ ನೀರು ಹರಿದು ಬಂದಿರುವುದಲ್ಲದೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ತೊಂದರೆ ಅನುಭವಿಸಿದರು.
Related Articles
ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಕೂಡ ಸಂಜೆ ವೇಳೆಗೆ ಭಾರೀ ಗುಡುಗು ಮಿಂಚು ಸಹಿತ ಗಾಳಿ ಮಳೆಯಾಗಿದೆ. ಮಳೆ ಸಾಮಾನ್ಯ ಪ್ರಮಾಣದಲ್ಲಿ ಸುರಿದಿದ್ದರೂ ಗುಡುಗು, ಮಿಂಚು ತೀವ್ರತೆ ಹೆಚ್ಚಿತ್ತು. ಜತೆಗೆ ಗಾಳಿಯೂ ಜೋರಾಗಿತ್ತು. ಸಂಜೆಯಿಂದಲೆ ದಟ್ಟವಾದ ಮೋಡದ ವಾತಾವರಣ ಗೋಚರಿಸಿದ್ದು, ಸಂಜೆ 5ರ ವೇಳೆಗೆ ಮಳೆ ಸುರಿಯಲಾರಂಭಿಸಿದೆ. ಸುಮಾರು ಅರ್ಧ ತಾಸು ಉತ್ತಮ ಮಳೆಯಾಗಿದೆ. ಬೆಳಗ್ಗೆಯಿಂದಲೆ ತಾಪಮಾನದಲ್ಲಿ ಬಿಸಿಯೇರಿದ್ದು ಸಂಜೆ ಸುರಿದ ಮಳೆಯಿಂದ ಇಳೆ ತಂಪಾಯಿತು.
Advertisement