Advertisement

ಮಳೆ ಹೊಡೆತಕ್ಕೆ ಹಳ್ಳಹಿಡಿದ ರಸ್ತೆಗಳು

12:26 PM Oct 13, 2021 | Team Udayavani |

ವಾಡಿ: ಕಳೆದ ಹತ್ತಾರು ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ನೀರಿನ ಹರಿವಿಗೆ ಡಾಂಬರ್‌ ಕಿತ್ತಿ ಹೋಗಿದೆ. ಸಿಡಿಲಬ್ಬರದ ಮಳೆ ಇಬ್ಬರು ರೈತರ ಸಾವಿಗೂ ಕಾರಣವಾಗಿದೆ.

Advertisement

ಚಿತ್ತಾಪುರ ಮೀಸಲು ಮತಕ್ಷೇತ್ರ ವಾಡಿ ನಗರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮಳೆಯ ಹೊಡೆತಕ್ಕೆ ನಲುಗಿವೆ. ಸತತ ಮಳೆಯಿಂದ ನೆಲದ ತೇವಾಂಶ ಹೆಚ್ಚಿದ್ದರಿಂದ ಡಾಂಬರೀಕರಣದ ರಸ್ತೆಗಳು ಹಾಳಾಗಿ ಕಾಲು ದಾರಿಯಂತಾಗಿವೆ. ಬಹುತೇಕ ಕಡೆಗಳಲ್ಲಿ ಸಣ್ಣ ಸೇತುವೆಗಳು ಕುಸಿದು ಬಿದ್ದಿವೆ. ಇದರಿಂದ ವಾಹನ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.

ನಗರ ಹೊರ ವಲಯದ ಕಮರವಾಡಿ ಗ್ರಾಮದ ರಸ್ತೆಯಂತೂ ಕಲ್ಲು ಗಣಿ ತ್ಯಾಜ್ಯಗಳ ರಾಶಿ ಮಧ್ಯೆ ಕಣ್ಮರೆಯಾಗಿದೆ. ಗಣಿ ಪ್ರದೇಶಗಳಿಂದ ಹರಿದು ಬರುವ ನೀರಿನಿಂದ ಡಾಂಬರೀಕರಣದ ರಸ್ತೆ ಪುಡಿಪುಡಿಯಾಗಿದೆ. ರಸ್ತೆ ಒಡೆದು ಹಳ್ಳದ ರೂಪ ಪಡೆದುಕೊಂಡಿದೆ. ಕೊಚ್ಚಿಕೊಂಡು ಹೋದ ರಸ್ತೆಯಲ್ಲೇ ಗಣಿ ಲಾರಿಗಳ ಓಡಾಟ ಮುಂದುವರಿದಿದೆ. ಹೀಗಾಗಿ ಕಂದಕಗಳು ಉಂಟಾಗಿ ದ್ವಿಚಕ್ರ ವಾಹನಗಳ ಅಪಘಾತಗಳಿಗೆ ಕಾರಣವಾಗಿದೆ.

ಲಕ್ಷ್ಮೀಪುರವಾಡಿ, ಬಳವಡಗಿ, ಕೊಂಚೂರ, ಕಡಬೂರ, ಚಾಮನೂರ, ನಾಲವಾರ, ಮಾರಡಗಿ, ಮಳಗ, ದೇವಾಪುರ, ಸೂಲಹಳ್ಳಿ, ಆಲೂರ, ರಾಮನಗರ ತಾಂಡಾ, ಡಿಗ್ಗಿ ತಾಂಡಾ, ಕನಗನಹಳ್ಳಿ ಗ್ರಾಮಗಳ ರಸ್ತೆಗಳ ಡಾಂಬರ್‌ ಕಿತ್ತು ಹೋಗಿದೆ. ಈ ಹದಗೆಟ್ಟ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು ಎಂದು ಗ್ರಾಮೀಣ ಭಾಗದ ಜನರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next