Advertisement

Heavy Rain; ಅಡಿಕೆ ಕೃಷಿಕರಿಗೆ ಈ ಬಾರಿ ಮತ್ತೆ ಕೊಳೆರೋಗ ಭೀತಿ

01:08 AM Jul 21, 2024 | Team Udayavani |

ಮಂಗಳೂರು: ಜುಲೈ ತಿಂಗಳಿನಲ್ಲಿ ಮಳೆ ನಿರಂತರ ಅಬ್ಬರಿಸಿರುವುದರಿಂದ ಸುಮಾರು 6 ವರ್ಷಗಳ ಬಳಿಕ ಜಿಲ್ಲೆಯ ಅಡಿಕೆ ಕೃಷಿಕರಿಗೆ ಮತ್ತೆ ಕೊಳೆರೋಗದ ಭೀತಿ ಎದುರಾಗಿದೆ.

Advertisement

ಈಗಾಗಲೇ ಕೆಲವೆಡೆ ಕೊಳೆ ರೋಗದ ಸೂಚನೆ ಸಿಕ್ಕಿದೆ. ಮುಂದೆ ಬಿಸಿಲು ಬರದೆ ಹೋದರೆ ಮಹಾಳಿ ರೋಗ ವ್ಯಾಪಕವಾಗಿ ಕಾಡುವ ಸಾಧ್ಯತೆ ಇದೆ. 2018ರಲ್ಲಿ ಕೊನೆಯ ಬಾರಿಗೆ ಜಿಲ್ಲೆಯಲ್ಲಿ ಕೊಳೆರೋಗ ಕಾಣಿಸಿಕೊಂಡಿತ್ತು, ಆ ಬಳಿಕದ ವರ್ಷಗಳಲ್ಲಿ ಜುಲೈ ತಿಂಗಳಿನಲ್ಲಿ ಮಳೆ ಕ್ಷೀಣವಾಗಿ ಸುರಿದಿದ್ದು, ಮಧ್ಯೆ ಹಲವು ದಿನ ಬಿಸಿಲಿನ ವಾತಾವರಣವೇ ಇತ್ತು.

ಹಾಗಾಗಿ ರೋಗಬಾಧೆ ಇರಲಿಲ್ಲ. ಇದ್ದರೂ ಕೆಲವು ಕಡೆ ಮಾತ್ರ ಕಾಣಿಸಿಕೊಂಡಿತ್ತು. ಆದರೆ ಈ ಬಾರಿ ಕಳೆದ ಸುಮಾರು 15-20 ದಿನಗಳಿಂದ ಮಳೆ ತೀವ್ರ ಹೆಚ್ಚಾಗಿದೆ, ಅಲ್ಲದೆ ಒಂದು ವಾರದಿಂದ ಬಿಡುವಿಲ್ಲದೆ ಸುರಿಯುತ್ತಲೇ ಇದೆ. ವಾತಾವರಣದ ತಾಪಮಾನವೂ 18ರಿಂದ 22 ಡಿಗ್ರಿ ಸೆ. ಆಸುಪಾಸಿನಲ್ಲಿರುವುದು, ಜತೆಗೆ ಆದ್ರìತೆ ಶೇ. 85-90ರಷ್ಟು ಇರುವುದು ಮಹಾಳಿ ರೋಗಕ್ಕೆ ಕಾರಣವಾಗುವ ಶಿಲೀಂಧ್ರ ಕ್ಷಿಪ್ರವಾಗಿ ಬೆಳವಣಿಗೆ ಮತ್ತು ಪ್ರಸಾರಗೊಳ್ಳುವುದಕ್ಕೆ ಪೂರಕ ಪರಿಸ್ಥಿತಿ ಸೃಷ್ಟಿಸಿದೆ. ಇದು ಕೊಳೆರೋಗದ ಭೀತಿ ಹೆಚ್ಚಾಗಲು ಕಾರಣ.

ಮದ್ದು ಬಿಟ್ಟಾಗಿಲ್ಲ
ಜಿಲ್ಲೆಯಲ್ಲಿ ಮಳೆಗಾಲಕ್ಕೆ ಮೊದಲು ಹಾಗೂ ಮಳೆಗಾಲದ ಮಧ್ಯೆ ಬಿಸಿಲಿರು ವಾಗ ಶಿಲೀಂಧ್ರ ತಡೆಗೆ ಬೋರ್ಡೊ ದ್ರಾವಣ ಸಿಂಪಡಣೆ ನಡೆಯುವುದು ರೂಢಿ. ಈ ಬಾರಿ ಇದು ಎಲ್ಲ ಕಡೆ ಪೂರ್ತಿಯಾಗಿಲ್ಲ. ಕೆಲವು ಕಡೆ ಮೇ ಎರಡನೇ ವಾರದಿಂದಲೇ ಆರಂಭ ಗೊಂಡ ಮಳೆ ಬಿಟ್ಟಿಲ್ಲ. ಹಾಗಾಗಿ ಔಷಧ ಸಿಂಪಡಣೆ ಸರಿಯಾಗಿ ಆಗಿಲ್ಲ, ಕೆಲವು ಕಡೆ ನಡೆದಿದೆಯಾದರೂ ಭಾರೀ ಮಳೆಯಿಂದಾಗಿ ಅದರ ಪರಿಣಾಮ ಹೆಚ್ಚು ದಿನ ಉಳಿಯಲಾರದು ಎನ್ನುವುದು ಆತಂಕಕ್ಕೆ ಕಾರಣ.

ಜಿಲ್ಲೆಯಲ್ಲಿ ಸುಮಾರು 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯ ಲಾಗುತ್ತಿದ್ದು, ಸರಾಸರಿ ಸುಮಾರು 3,700 ಮೆಟ್ರಿಕ್‌ ಟನ್‌ ಅಡಿಕೆ ಸಿಗುತ್ತಿದೆ. 2018ರಲ್ಲಿ 33,350 ಹೆಕ್ಟೇರ್‌ ಪ್ರದೇಶ ಕೊಳೆರೋಗ ಬಾಧಿತವಾಗಿದ್ದು, 60 ಕೋ. ರೂ. ಪರಿಹಾರ ಪ್ಯಾಕೇಜ್‌ಗೆ ತೋಟಗಾರಿಕೆ ಇಲಾಖೆಯಿಂದ ಪ್ರಸ್ತಾ ವನೆ ಹೋಗಿದ್ದರೂ ಸಿಕ್ಕಿರಲಿಲ್ಲ. ಅದಕ್ಕೂ ಹಿಂದೆ 2013ರಲ್ಲಿ ಸುಮಾರು 25 ಸಾವಿರ ಹೆಕ್ಟೇರ್‌ ಪ್ರದೇಶ ಕೊಳೆ ರೋಗಕ್ಕೆ ತುತ್ತಾಗಿದ್ದರೆ, 2007ರಲ್ಲಿ 20 ಸಾವಿರ ಅಡಿಕೆ ಕೃಷಿಕರ ತೋಟ ರೋಗಕ್ಕೆ ಸಿಲುಕಿತ್ತು. 2013ರಲ್ಲಿ 30 ಕೋ. ರೂ.,2007ರಲ್ಲಿ 4.59 ಕೋ.ರೂ. ಪ್ಯಾಕೇಜ್‌ ಘೋಷಣೆಯಾಗಿದ್ದರೆ ಅಲ್ಪಸ್ವಲ್ಪ ಮಾತ್ರ ವಿತರಣೆಯಾಗಿತ್ತು ಎನ್ನುತ್ತಾರೆ ಕೃಷಿಕರು.

Advertisement

ನಳ್ಳಿ ಉದುರುವುದು ಅತ್ಯಧಿಕ
ಈ ಬಾರಿ ಹವಾಮಾನ ಬದಲಾವಣೆಯಂತಹ ಕಾರಣಗಳಿಂದಾಗಿ ಕೊಳೆರೋಗವಲ್ಲದೆ ಅಡಿಕೆ ನಳ್ಳಿ ಹಂತದಲ್ಲೇ ಉದುರತೊಡಗಿರುವುದು ಕೂಡ ಕಳವಳ ಸೃಷ್ಟಿಸಿದೆ. ಸುಳ್ಯ, ಸುಬ್ರಹ್ಮಣ್ಯ ಆಸುಪಾಸಿನ ಘಟ್ಟದ ತಪ್ಪಲಿನಲ್ಲಿರುವ ರೈತರು ಹವಾಮಾನ ಬದಲಾವಣೆಯಿಂದಾಗಿ ಆಗಿರುವ ಈ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಅಡಿಕೆಗೆ ಎಪ್ರಿಲ್‌-ಮೇ ತಿಂಗಳಿನಲ್ಲಿ ಮಳೆ ಬಂದರೆ ಉತ್ತಮ ಬೆಳವಣಿಗೆಯಾಗುತ್ತದೆ. ಆದರೆ ಆ ಮಳೆ ಬಾರದೆ ಹೋದರೆ ಬಿಸಿಲಿನ ಝಳಕ್ಕೆ ಅತ್ತ ಬೆಳವಣಿಗೆಯೂ ಆಗದ, ಇತ್ತ ಎಳೆಯೂ ಅಲ್ಲದ ಅಡಿಕೆಗಳು ನಳ್ಳಿ ಹಂತದಲ್ಲಿಯೇ ಬೀಳತೊಡಗುತ್ತದೆ ಎನ್ನುತ್ತಾರೆ ಕೃಷಿಕ ಪ್ರಸನ್ನ ಎಣ್ಮೂರು.

ನಿರಂತರ ಮಳೆಯಿಂದಾಗಿ ಹಲವೆಡೆ ತೋಟಗಳಿಗೆ ಔಷಧ ಸಿಂಪಡಣೆ ಅರ್ಧಕ್ಕೆ ಬಾಕಿಯಾದದ್ದೂ ಇದೆ, ಈಗಿನ ಹವಾ ಮಾನ ಶಿಲೀಂಧ್ರ ಬೆಳವಣಿಗೆಗೆ ಪೂರಕವೂ ಆಗಿದೆ. ಇದುವರೆಗೆ ಕೊಳೆರೋಗ ಕಾಣಿಸಿಲ್ಲವಾದರೂ ಆತಂಕವಂತೂ ಇದೆ. ಜತೆಗೆ ನಳ್ಳಿ ಬೀಳುವುದು ಈಗ ಅಧಿಕ ಪ್ರಮಾಣದಲ್ಲಿರುವುದು ಕೃಷಿಕರಿಗೆ ನಷ್ಟದಾಯಕ.-ಮಹೇಶ್‌ ಪುಚ್ಚಪ್ಪಾಡಿ, ಅಧ್ಯಕ್ಷರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ

ನಿರಂತರ ಮಳೆಯಾಗುತ್ತಿರುವುದರಿಂದ ಅಡಿಕೆಗೆ ಕೊಳೆರೋಗ ಬಾಧೆಯಾಗುವ ಸಾಧ್ಯತೆ ಇದೆ. ಔಷಧ ಸಿಂಪಡಣೆ ಮಾಡಲು ಸೂಚಿಸಿದ್ದೇವೆ. ಮಳೆಗೆ ಬಿಡುವು ಲಭಿಸಿದೊಡನೆ ಸಿಂಪಡಣೆ ಮಾಡಿದರೆ ಮುಂದಿನ 45 ದಿನಕ್ಕೆ ರಕ್ಷಣೆ ಸಿಗಬಹುದು.
-ಮಂಜುನಾಥ್‌ ಡಿ., ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಮಂಗಳೂರು

ವೇಣು ವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next