ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 523.7 ಮಿಮೀ ಮಳೆಯಾಗಿದ್ದು, ಸರಾಸರಿ 47.6 ಮಿಮೀ ಮಳೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 240 ಮಿಮೀ ಇದ್ದು, ಇದುವರೆಗೆ ಸರಾಸರಿ 273.9 ಮಿಮೀ ಮಳೆ ದಾಖಲಾಗಿದೆ.
ಕಾಳಿ ನದಿಯ ಜಲಾಶಯಗಳ ಹಿನ್ನೀರು ಪ್ರದೇಶದಲ್ಲಿ ಸತತ ಮಳೆಯ ಪರಿಣಾಮ ಗುರುವಾರ ಸೂಪಾ ಜಲಾಶಯದ ಕ್ರಸ್ಟ್‌ಗೇಟ್ ತೆರೆದು ನೀರು ಹೊರ ಬಿಡಲಾಗಿತ್ತು. ಶುಕ್ರವಾರ ಕದ್ರಾ ಜಲಾಶಯದಿಂದ 63000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ನದಿ ದಂಡೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಯಾವುದೇ ಗ್ರಾಮದ ಜನರನ್ನು ಸ್ಥಳಾಂತರ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಗಂಜಿ ಕೇಂದ್ರ ತೆರೆಯುವ ಸನ್ನಿವೇಶ ಸಹ ಇಲ್ಲ. ಜಲಾಶಯಗಳು ಪೂರ್ಣ ಭರ್ತಿಯಾಗುವ ಮುನ್ನವೇ, ಜಲಾಶಯಗಳಿಂದ ನೀರು ಹೊರ ಬಿಡಲಾಗುತ್ತಿದೆ. ನದಿ ದಂಡೆಯ ಜನರಿಗೆ ತೊಂದರೆಯಾಗದಂತೆ ಮೊದಲೇ ಮುನ್ನೆಚ್ಚರಿಕೆ ನೀಡಲಾಗಿದೆ. ಮಳೆ ಕಡಿಮೆಯಾಗಿದ್ದರೂ ಸಹ ಬೆಟ್ಟ ಕಣಿವೆಗಳಿಂದ ಜಲಾಶಯಕ್ಕೆ ಹರಿದು ಬರುವ ಹಿನ್ನೀರಿನ ಪ್ರಮಾಣ ಹೆಚ್ಚುತ್ತಿದೆ. ಹಾಗಾಗಿ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. ಕದ್ರಾ ಜಲಾಶಯವನ್ನು 3 ಮೀ. ಖಾಲಿ ಇರುವಂತೆ ನೋಡಿಕೊಳ್ಳಲಾಗಿದೆ. ಸೂಪಾ ಜಲಾಶಯ ಭರ್ತಿಗೆ 0.75 ಮೀಟರ್ ಇರುವಂತೆ ಕಾಪಾಡಿಕೊಳ್ಳಲಾಗಿದೆ. ಕೊಡಸಳ್ಳಿ ಜಲಾಶಯವನ್ನು ಸಹ 2.5 ಮೀಟರ್ ಖಾಲಿ ಇರುವಂತೆ ನೋಡಿಕೊಂಡು, 73.12 ಮೀಟರ್ ವರೆಗೆ ಮಾತ್ರ ನೀರು ಸಂಗ್ರಹಿಸಿಕೊಳ್ಳಲಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನದಿ ದಂಡೆ ಜನರಿಗೆ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಪಿಸಿ ತಿಳಿಸಿದೆ.
ಕಳೆದ 24 ತಾಸುಗಳಲ್ಲಿ ಶುಕ್ರವಾರ ಬೆಳಗಿನ 8 ಗಂಟೆಯತನಕ ಅಂಕೋಲಾದಲ್ಲಿ 70 ಮಿಮೀ, ಭಟ್ಕಳ 22, ಹಳಿಯಾಳ 25.2, ಹೊನ್ನಾವರ 30.5, ಕಾರವಾರ 63.4, ಕುಮಟಾ 39.3, ಮುಂಡಗೋಡ 15.8, ಸಿದ್ದಾಪುರ 91.6, ಶಿರಸಿ 64.5, ಜೋಯಿಡಾ 38.2, ಯಲ್ಲಾಪುರ 63.2 ಮಿ.ಮೀ ಮಳೆಯಾಗಿದೆ.