Advertisement

ರೈತನ ಬಾಳಿಗೆ ಕೊಳ್ಳಿ ಇಟ್ಟ ಮಳೆ : ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆ

11:42 AM Jan 10, 2021 | Team Udayavani |

ಮುಧೋಳ: ನಿರಂತರವಾಗಿ ರೈತನ ಬಾಳಿನಲ್ಲಿ ಚೆಲ್ಲಾಟವಾಡುತ್ತಿರುವ ಮಳೆರಾಯ ತನ್ನ ಕರಾಳ ಛಾಯೆಯನ್ನು
ಮುಂದುವರಿಸುತ್ತಿದ್ದಾನೆ.

Advertisement

ಕಳೆದ ಮುಂಗಾರು ಅವಧಿಯಲ್ಲಿ ಹೊಲದಲ್ಲಿನ ಬೆಳೆ ಇನ್ನೇನು ಕೈಗೆ ಬಂದು ನಮ್ಮೆಲ್ಲ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಸುಗ್ಗಿ ಕಾಲದಲ್ಲಿ ಸುರಿದ ಅತಿಯಾದ ಮಳೆ ಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಮುಂಗಾರು ಅವಧಿಯಲ್ಲಿ ಮಳೆರಾಯ ನೀಡಿದ್ದ ಬರೆಯ ಗಾಯದ ನೋವಿನಿಂದ ಹೊರಬಂದು ಈ ಬಾರಿಯಾದರೂ ಬೆಳೆ ಕೈಗೆ ಸಿಗುತ್ತದೆ ಎಂಬ ನಿರೀಕ್ಷೆಗೆ ಮಳೆರಾಯ ಮತ್ತೆ ತಣ್ಣೀರೆರಚಿದ್ದಾನೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ತಾಲೂಕಿನ ಬಹುತೇಕ ಬೆಳೆಗಳು ಹಾನಿಯಾಗುವ ಮುನ್ಸೂಚನೆ ಮೂಡಿದೆ. ನಿತ್ಯ ಮೂರು ದಿನದಿಂದ ನಿತ್ಯ ಸಂಜೆ ವೇಳೆ ಜಿಟಿಜಿಟಿ ಮಳೆ ಹಾಗೂ ಬೆಳಗ್ಗೆ ಸಮಯದಲ್ಲಿ ಸುರಿಯುತ್ತಿರುವ ಮಂಜು ರೈತರನ್ನು ಕಂಗಾಲಾಗಿಸಿದೆ.

ಜೋಳದ ಜಿಗಿ ನಾಶ: ಹಿಂಗಾರಿ ಬೆಳೆಯಾದ ಬಿಳಿಜೋಳ ಅಕಾಲಿಕ ಮಳೆಯಿಂದಾಗಿ ಬೆಳೆಯ ಇಳುವರಿ ಕುಂಠಿತಗೊಳ್ಳುವ
ಭೀತಿ ಎದುರಾಗಿದೆ. ಅಕಾಲಿಕ ಮಳೆಯಿಂದಾಗಿ ಜೋಳದ ಜಿಗಿ ಆರುತ್ತದೆ. ಇದರಿಂದಾಗಿ ಬೆಳೆ ಹುಲುಸಾಗದೆ ಕಾಳು ಕಪ್ಪಿಟ್ಟುವ
ಸಂಭವ ಹೆಚ್ಚಾಗುತ್ತದೆ. ತಾಲೂಕಿನಲ್ಲಿ ಒಟ್ಟು 4119 ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಮಾಡಲಾಗಿದೆ. ಬಿತ್ತನೆ ಬಳಿಕ
ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆ ಕುಂಠಿತಗೊಂಡಿತ್ತು. ಕೆಲವೊಂದಿಷ್ಟು ರೈತರು ನೀರಾವರಿ ಮೂಲಕ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಇದೀಗ ಅಕಾಲಿಕವಾಗಿಸುರಿದ ಮಳೆ ಹಾಗೂ ಅನಿಶ್ಚಿತ ವಾತಾವರಣದಿಂದಾಗಿ ರೈತರಿಗೆ
ಇನ್ನಿಲ್ಲದ ಚಿಂತೆ ಕಾಡತೊಡಗಿದೆ.

ಕಡಲೆಗೆ ಹುಳಿ ಮುರಿಯುವ ಭೀತಿ: ತಾಲೂಕಿನ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಆದರೆ ಇದೀಗ ಸುರಿದ ಅಕಾಲಿಕ ಮಳೆಯಿಂದಾಗಿ ಕಡಲೆ ಇಳುವರಿಯೂ ಕುಂಠಿತಗೊಳ್ಳು ಸಂಭವ ಹೆಚ್ಚಿದೆ. ಸದ್ಯ ಕಡಲೆ ಬೆಳೆ ಹುಳಿಹಚ್ಚುವ ಸಮಯ. ಸೂಕ್ತ ರೀತಿಯಲ್ಲಿ ಕಡಲೆ ಹುಳಿಹಚ್ಚಿದರೆ ಮುಂದೆ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಆದರೆ ಸದ್ಯ ಸುರಿದ ಅಕಾಲಿಕ ಮಳೆಯಿಂದ ಹುಳಿಯೆಲ್ಲ ತೊಳೆದು ಹೋಗುತ್ತದೆ. ಇದರಿಂದಾಗಿ ಕಡಲೆ ಕಾಯಿಕಟ್ಟುವ ವೇಳೆಯಲ್ಲಿ ಜೊಳ್ಳಾಗುವ ಸಂಭವ ಹೆಚ್ಚಿರುತ್ತದೆ. ಇದರಿಂದಾಗಿ ಇಳುವರಿಯಲ್ಲಿಯೂ ಕುಂಠಿತಗೊಳ್ಳಲಿದೆ ಎಂಬುದು ರೈತರ ಅಭಿಪ್ರಾಯ.

Advertisement

ತಾಲೂಕಿನ 4541 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಕಳೆದೆರಡು ದಿನದಿಂದ ಸುರಿದ ಅಕಾಲಿಕ ಮಳೆಯಿಂದ ಕಡಲೆ ಬೆಳೆಗಾರರಿಗೂ ಆತಂಕ ಎದುರಾಗಿದೆ.

ಗೋಧಿಗೂ ಕಾದಿದೆ ಆಪತ್ತು: ಅಕಾಲಿಕ ಮಳೆಯಿಂದ ಗೋಧಿ ಬೆಳೆಗೂ ಆಪತ್ತು ಎದುರಾಗುವ ಸಂಭವವಿದೆ. ಅಕಾಲಿಕ
ಮಳೆಯಿಂದಾಗಿ ಗೋ  ಬೆಳೆಗೆ ಇಟ್ಟಂಗಿ ರೋಗದ ಭಿತಿ ಎದುರಿಸುತ್ತಿದೆ. ಮೇಲಿನ ಬೆಳೆಗಳು ಮಾತ್ರವಲ್ಲದೆ ದ್ವಿದಳ ಧಾನ್ಯಗಳು
ಸಹ ಅಕಾಲಿಕ ಮಳೆಗೆ ತುತ್ತಾಗಿ ಇಳುವರಿ ಕುಂಠಿತಗೊಳ್ಳುವ ಸಂಭವವಿರುವುದರಿಂದ ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

– ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next