Advertisement

ಮಳೆ ಬಂದ್ರೆ ತೀವ್ರ ತೊಂದರೆ: 20ಕ್ಕೂ ಅಧಿಕ ಕುಟುಂಬಗಳ ನೀಗದ ಸಮಸ್ಯೆ

06:08 PM Aug 29, 2022 | Team Udayavani |

ದೇವದುರ್ಗ: ಸಮೀಪದ ಕಕ್ಕಲದೊಡ್ಡಿ ಗ್ರಾಮದ 20ಕ್ಕೂ ಅಧಿಕ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳಿಗೆ ಮಳೆ ಬಂದರೆ ಕಣ್ಣೀರು ಕಪಾಳಕ್ಕೆ ಬರುತ್ತದೆ. ಇವರ ಮನೆಗಳು ತಗ್ಗು ಪ್ರದೇಶದಲ್ಲಿ ಇರುವ ಹಿನ್ನೆಲೆಯಲ್ಲಿ ಮಳೆ ಬಂದರೆ ಸಾಕು ಮನೆಗಳಿಗೆ ನೀರು ನುಗ್ಗುತ್ತದೆ.

Advertisement

ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಈ ಮನೆಗಳಿಗೆ ನೀರು ನುಗ್ಗಿ ದವಸ ಧ್ಯಾನಗಳು ನೀರು ಪಾಲಾಗಿವೆ. ಇದು ಒಂದೆರಡು ದಿನದ ಕತೆಯಲ್ಲ. ಸುಮಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಮಳೆ, ಗಾಳಿಗೆ ಜೀವನವೇ ಬೇಸರಗೊಂಡಿರುವ ಕುಟುಂಬಗಳ ಕಣ್ಣೀರ ಕಥೆಯನ್ನು ಕೇಳುವವರೇ ಇಲ್ಲದಂತಾಗಿದೆ. ಅದು ಅಲ್ಲದೇ ಒಂದು ಕುಟುಂಬದಲ್ಲಿ ಮೂರ್‍ನಾಲ್ಕು ಜನರು ವಾಸಿಸುತ್ತಿದ್ದು, ಕಿರಿದಾದ ಮನೆಗಳಿವೆ. ಸಂಬಂಧಿಕರು ಬಂದರೆ ಮಲಗಲು ದೇವಸ್ಥಾನ ಆವರಣ, ಸಮುದಾಯ ಭವನಗಳನ್ನು ಅವಲಂಬಿಸುವಂತಾಗಿದೆ.

ಗ್ರಾಪಂ ಆಡಳಿತ ಮಂಡಳಿ ಈ ಕುಟುಂಬಗಳ ಸಮಸ್ಯೆ ನೀಗಿಸುವಲ್ಲಿ ವಿಫಲವಾಗಿದೆ. ಚುನಾವಣೆ ಬಂದಾಗ ಮೊಸಳೆ ಕಣ್ಣೀರು ಸುರಿಸಿ ಮತ ಪಡೆಯುವ ಚುನಾಯಿತ ಜನಪ್ರತಿನಿಧಿಗಳು ಸೌಲಭ್ಯ ಕಲ್ಪಿಸಲು ನಿರ್ಲಕ್ಷé ತಾಳಿದ ಪರಿಣಾಮ ಹಗಲು ರಾತ್ರಿ ಕಣ್ಣೀರು ಹಾಕುವಂತಾಗಿದೆ.

ಕಣ್ಣೀರಿಟ್ಟ ಮಹಿಳೆ: ಶುಕ್ರವಾರ ತಡರಾತ್ರಿ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ರಾತ್ರಿ ಜಾಗರಣೆ ಮಾಡುವ ಸ್ಥಿತಿ ಎದುರಾಯಿತು. ಹೊಲ, ಗದ್ದೆಗಳಿಗೆ ಕೆಲಸಕ್ಕೆ ಹೋದಾಗ ಕೂಡಿಟ್ಟ ಎರಡು ಸಾವಿರ ರೂ., ಕಷ್ಟ ಕಾಲಕ್ಕೆ ಆಸರೆ ಆಗುತ್ತದೆ ಎಂದು ನಂಬಿಕೆಯಿಟ್ಟಿದ್ದ ಅರ್ಧ ತೊಲೆ ಬಂಗಾರದ ಕರಳಿ ನೀರು ಪಾಲಾಗಿವೆ. ದವಸಧ್ಯಾನಗಳು ನೀರಿನಲ್ಲಿ ತೇಲಾಡುತ್ತಿದ್ದವು. ಶಾಶ್ವತ ಸೂರು ಕಲ್ಪಿಸಿ ನರಕದಿಂದ ಪಾರು ಮಾಡಿ ಎಂದು ಯಲ್ಲಮ್ಮ ಕೈಮುಗಿದು ನೋವು ತೋಡಿಕೊಂಡರು. ಹರಿಜನ, ಗಿರಿಜನ ಕಲ್ಯಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೋಟ್ಯಂತರ ರೂ. ಅನುದಾನ ಬಳಸಲಾಗುತ್ತಿದೆ. ಅದಷ್ಟೋ ಕುಟುಂಬಗಳು ಯಾವುದೇ ಅಭಿವೃದ್ಧಿ ಕಾಣದೇ ವಂಚಿತಗೊಂಡಿವೆ.

ಸರಕಾರಿ ಜಾಗ ಗೈರಾಣಿ ಭೂಮಿ ಸರ್ವೇ ಮಾಡಿ ಹದ್ದುಬಸ್ತ್ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಸರೆ ಯೋಜನೆಯಡಿ ಕಾಯ್ದಿರಿಸುವ ಜಾಗ ಕುರಿತು ಪರಿಶೀಲನೆ ಮಾಡುತ್ತೇನೆ. ಮಳೆ ನೀರು ನುಗ್ಗಿದ ಬಹುತೇಕ ಮಹಿಳೆಯರು ಮನೆಗಳ ಕಟ್ಟಿಕೊಳ್ಳಲು ಜಾಗ ಕೊಡುವಂತೆ ಮನವಿ ಮಾಡಿದ್ದಾರೆ. -ಶ್ರೀನಿವಾಸ ಚಾಪಲ್‌, ತಹಶೀಲ್ದಾರ್‌

Advertisement

ಸುರಿದ ಮಳೆಗೆ ಹಣ, ಬಂಗಾರ ನೀರು ಪಾಲಾಗಿವೆ. ದವಸಧಾನ್ಯ ನೀರಿಗೆ ಹರಿದುಕೊಂಡು ಹೋಗಿವೆ. -ಯಲ್ಲಮ್ಮ, ನೊಂದ ಕಕ್ಕಲದೊಡ್ಡಿ ನಿವಾಸಿ

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next