ಮಹಾನಗರ: ಎರಡು ದಿನಗಳಿಂದ ಮಂಗಳೂರು ನಗರದಲ್ಲಿಯೂ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬುಧವಾರ ಹಾಗೂ ಗುರುವಾರವೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ನಗರದಲ್ಲಿಯೂ ಮಳೆಯಿಂದಾಗಿ ಯಾವುದೇ ನಷ್ಟ-ಹಾನಿ ಸಂಭವಿಸದಂತೆ ಜನರಿಗೆ ಎಚ್ಚರಿಕೆ ವಹಿಸುವುದಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ನಗರದಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ಭಾರೀ ಮಳೆ ಯಾಗಿದ್ದು, ಮಂಗಳವಾರವೂ ಅದು ಮುಂದುವರಿದಿತ್ತು. ಮಂಗಳವಾರ ಬೆಳಗ್ಗೆ ಗಾಳಿ ಹಾಗೂ ಭಾರೀ ಮಳೆಯಿಂದಾಗಿ ಕೆಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ಇನ್ನು ನಗರದಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರಲಿಲ್ಲ. ಹೀಗಾಗಿ, ಬೆಳಗ್ಗೆ ಸುರಿದ ಭಾರೀ ಮಳೆಯು ಕೆಲವು ಕಡೆಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಹಾಗೂ ಅವರನ್ನು ಕರೆದೊಯ್ದ ಹೆತ್ತವರಿಗೆ ಸ್ವಲ್ಪ ಮಟ್ಟಿಗೆ ಕಿರಿಕಿರಿ ಉಂಟು ಮಾಡಿತ್ತು.
ಉರ್ವದ ವೆಲ್ಸ್ಪೇಟೆಯ ಗೌರಿ ಎಂಬವರ ಮನೆಯ ಮೇಲೆ ಮರದ ರೆಂಬೆ ಮುರಿದು ಬಿದ್ದ ಪರಿಣಾಮ, ಮನೆ ಸಂಪೂರ್ಣ ಹಾನಿಯಾಗಿದೆ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ನಂತೂರಿನ ಶಕ್ತಿನಗರದ ಕಂಡೆಟ್ಟುವಿನಲ್ಲಿ ಮರವೊಂದು ಬುಡ ಸಮೇತ ಉರುಳಿದೆ.
ಜೈಲ್ರೋಡ್ ಬಳಿ ನಿರಂತರ ಸುರಿದ ಮಳೆಯಿಂದಾಗಿ ಭಾರೀ ಪ್ರಮಾಣದ ನೀರು ಹರಿದು ಮನೆಯ ಕಂಪೌಂಡ್ ಕುಸಿದಿದೆ. ಕುಸಿದ ಜಾಗದಲ್ಲಿಯೇ ಸಾಕಷ್ಟು ನೀರು ಹರಿಯುತ್ತಿತ್ತು. ಕುಸಿತದಿಂದಾಗಿ ಕಂಪೌಂಡ್ ಮಣ್ಣು ಒಳಚರಂಡಿಗೆ ಬಿದ್ದ ಪರಿಣಾಮ ಮನಪಾ ಮಣ್ಣು ತೆರವು ಕಾರ್ಯಾಚರಣೆ ನಡೆಸಿದೆ. ಪಡೀಲು ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ನಗರದ ಕೊಟ್ಟಾರ, ಕುದ್ರೋಳಿ, ಕೊಟ್ಟಾರ ಚೌಕಿ, ಮಣ್ಣಗುಡ್ಡೆ, ಕುದ್ರೋಳಿ, ಡೊಂಗರಕೇರಿ, ಅಳಕೆ ಸಹಿತ ಮತ್ತಿತರ ಪ್ರದೇಶಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಬೆಳಗ್ಗೆ ಕೆಲಸಕ್ಕೆಂದು ತೆರಳುವ ಸಮಯದಲ್ಲಿ ಭಾರೀ ಮಳೆಯಾಗಿದ್ದು, ಇದರಿಂದಾಗಿ ನಗರದ ಪಂಪ್‌ವೆಲ್, ನಂತೂರು, ಕಂಕನಾಡಿ, ಪಿ.ವಿ.ಎಸ್. ವೃತ್ತ, ಕೊಟ್ಟಾರ ಚೌಕಿ, ಜ್ಯೋತಿ ವೃತ್ತ, ಬಂಟ್ಸ್ ಹಾಸ್ಟೆಲ್, ಸ್ಟೇಟ್ಬ್ಯಾಂಕ್, ಹಂಪನಕಟ್ಟೆ ಸಹಿತ ಇನ್ನಿತರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮುಂಗಾರು ಮುಂಜಾಗ್ರತೆಗೆಂದು ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ 24 ಗಂಟೆಗಳ ಕಂಟ್ರೋಲ್ ರೂಂ. ತೆರೆಯಲಾಗಿದೆ. ಹಗಲು ಮತ್ತು ರಾತ್ರಿ ಪ್ರತ್ಯೇಕ ತಂಡವನ್ನು ನೇಮಿಸಲಾಗಿದೆ. ಸಾರ್ವಜನಿಕರು 0824- 2220319/2220306 ದೂರವಾಣಿ ಸಂಖ್ಯೆ ಕರೆ ಮಾಡಿ ದೂರುಗಳನ್ನು ನೀಡಬಹುದು. ಈ ದೂರುಗಳನ್ನು ಗಮನಿಸಿ ಎಂಜಿನಿಯರ್ ಸಮೇತ ಗ್ಯಾಂಗ್ ತೆರಳುತ್ತದೆ. ಕಾರ್ಮಿಕರು, ಜೇಸಿಬಿ, ಟಿಪ್ಪರ್‌ಗಳು ಸನ್ನದ್ಧವಾಗಿರುತ್ತವೆ. ಜಿಲ್ಲಾಡಳಿತ ಕಚೇ ರಿಯ 1077ಕಂಟ್ರೋಲ್ ರೂಂಗೆ ಕರೆ ಮಾಡಬಹುದು.
ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗಗಳಲ್ಲಿ ಇನ್ನೆರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ತಣ್ಣೀರುಬಾವಿ ಮತ್ತು ಪಣಂಬೂರು ಬೀಚ್‌ಗಳಲ್ಲಿ ಅಲೆಗಳ ಅಬ್ಬರ ಇದ್ದು, ಪ್ರವಾಸಿಗರು ನೀರಿಗೆ ಇಳಿಯದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ
ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗಗಳಲ್ಲಿ ಇನ್ನೆರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ತಣ್ಣೀರುಬಾವಿ ಮತ್ತು ಪಣಂಬೂರು ಬೀಚ್‌ಗಳಲ್ಲಿ ಅಲೆಗಳ ಅಬ್ಬರ ಇದ್ದು, ಪ್ರವಾಸಿಗರು ನೀರಿಗೆ ಇಳಿಯದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.