ಮಂಡ್ಯ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದಾರೆ. ಬುಧವಾರ ಮಧ್ಯಾಹ್ನವೂ ಧಾರಾಕಾರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ಮಂಡ್ಯ ನಗರ ಸೇರಿದಂತೆ ವರುಣ ಅಬ್ಬರಿಸಿದ್ದಾನೆ. ಮಧ್ಯಾಹ್ನ 1 ಗಂಟೆಗೂ ಹೆಚ್ಚು ಕಾಲ ಮಳೆಯಿಂದ ನಗರದಲ್ಲಿ ವಾಹನ ಸವಾರರು, ಸಾರ್ವಜನಿಕರು ಕಿರಿಕಿರಿ ಅನುಭವಿಸಬೇಕಾಯಿತು. ವ್ಯಾಪಾರ , ಕಾರ್ಮಿಕರಿಗೆ ತೊಂದರೆಯಾಯಿತು.
ಮನೆಗಳಿಗೆ ಮಳೆ ನೀರು: ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನ ಸುರಿದ ಮಳೆಯಿಂದ ನಗರದಲಿ ಅವಾಂತರ ಸೃಷ್ಟಿಯಾಗಿದ್ದು, ಜನ ಪರದಾಡುವಂತಾಗಿದೆ. ನಗರದ ಕಾರ್ಮಿಕರ ಕಾಲೋನಿ, ಕಾಲೋನಿಯ ಹಲವು ಮನೆಗಳಿ ರಾತ್ರಿಯೇ ಕೆಲವು ಮನೆಗಳಿಗೆ ಮಳೆ ನೀರು ಮನೆಗೆ ನುಗ್ಗಿದ್ದರಿಂದ ಕುಟುಂಬಸ್ಥರು ರಾತ್ರಿಪೂರ್ತಿ ನೀರು ಹೊರ ಹಾಕಲು ಜಾಗರಣೆ ಅನುಭವಿಸಬೇಕಾಯಿತು.
ರಸ್ತೆಗಳು ಜಲಾವೃತ: ಕಾಲೋನಿಯ ರಸ್ತೆಗಳೂ ಹಳ್ಳ ಗುಂಡಿಗಳಿಂದ ಕೂಡಿದ್ದು, ನೀರಿನಿಂದ ಆವೃತವಾಗಿದೆ. ಕೆಸರು ಮಯವಾಗಿದೆ. ಜನರು ತಿರುಗಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಮನೆಗಳಿಗೆ ನೀರು ನುಗ್ಗಿದ್ದು ಮಂಗಳವಾರ ರಾತ್ರಿ ನೀರು ಹೊರ ಹಾಕುವುದರಲ್ಲಿ ನಿರತರಾಗಿದ್ದರು.
ಕಾಲೋನಿಯ ಅಂಗಡಿಗಳಿಗೂ ನೀರು ನುಗ್ಗಿದ್ದು ತರಕಾರಿಗಳು, ಕೆಲವು ಸಮಾಗ್ರಿಗಳು ಹಾಳಾಗಿದೆ. ಮಳೆ ಬಂದರೆ ರೈತರ ಮೊಗದಲ್ಲಿ ಸಂತಸ ಮೂಡಿಸಿದರೆ, ಇಲ್ಲಿನ ನಿವಾಸಿಗಳ ಮುಖದಲ್ಲಿ ಭಯದ ಛಾಯೆ ಕಂಡು ಬರುತ್ತದೆ. ಇಲ್ಲಿನ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸೂಕ್ತ ರಸ್ತೆ ಕಲ್ಪಿಸಿ: ರಸ್ತೆಗಳನ್ನು ಮಾಡುತ್ತೇವೆ ಎಂದು ಅಗೆದು ಅಗೆದು ಕಾಲೋನಿಯ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಮಳೆ ನೀರು ಮನೆಗೆ ನುಗ್ಗಿದರೆ ಅದನ್ನು ಹೊರ ಹಾಕುವುದೇ ಒಂದು ಕೆಲಸವಾಗಿದೆ. ಇದರಿಂದ ಮನೆಯ ಕೆಲವು ಸಾಮಾನುಗಳು ಹಾಳಾಗಿದ್ದು, ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಬುಧವಾರ ಮಧ್ಯಾಹ್ನವೂ ಅದೇ ಮುಂದುವರೆದಿತ್ತು.
139.16 ಮಿ.ಮೀ ಮಳೆ: ಬುಧವಾರ ಬೆಳಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 136.16 ಮೀ.ಮೀ ಮಳೆಯಾಗಿರುವ ವರದಿ ಯಾಗಿದೆ. ಮದ್ದೂರು ತಾಲೂಕಿನಲ್ಲಿ ಅತಿ ಹೆಚ್ಚು 48 ಮಿ.ಮೀ ಸರಾಸರಿ ಮಳೆಯಾಗಿದೆ. ಉಳಿದಂತೆ ಮಂಡ್ಯ 43, ಪಾಂಡವಪುರ 2.8, ಮಳವಳ್ಳಿ 24.6, ಶ್ರೀರಂಗ ಪಟ್ಟಣ2.4,ಕೆ.ಆರ್.ಪೇಟೆ1.6 ಹಾಗೂ ನಾಗಮಂಗಲ ತಾಲೂಕಿನಲ್ಲಿ17.3 ಮಿ.ಮೀ ಮಳೆಯಾಗಿದೆ.