ಬೆಂಗಳೂರು: ಸೌರಾಷ್ಟ್ರದಿಂದ ಕೇರಳಕ್ಕೆ ತಗ್ಗಿದ ಮೇಲ್ಮೈ ಸುಳಿಗಾಳಿ (ಟ್ರಪ್) ಚಲಿಸುತ್ತಿರುವ ಪರಿಣಾಮ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎರಡು ದಿನಗಳ ಹಿಂದೆ ಮಳೆ ಸುರಿಯುವ ಪ್ರಮಾಣ ಕಡಿಮೆಯಾಗಬಹುದು ಎಂದು ತಿಳಿಸಿದ್ದ ಹವಾಮಾನ ಇಲಾಖೆ, ಮತ್ತೆ ಮಳೆ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳಲ್ಲಿ ಮಿಂಚು, ಗುಡುಗು ಸಹಿತ ಧಾರಾಕಾರ ಮಳೆಯಾಗುವ ಲಕ್ಷಣಗಳಿವೆ ಎಂದು ತಿಳಿಸಿದೆ.
ಮೀನುಗಾರರಿಗೆ ಎಚ್ಚರಿಕೆ: ರಾಜ್ಯಾದ್ಯಂತ ಗಾಳಿಯ ವೇಗ ಕೂಡ ಜಾಸ್ತಿಯಾಗಿದೆ. ಸಾಮಾನ್ಯವಾಗಿ 30ರಿಂದ 40 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಗಾಳಿಯ ವೇಗ 40ರಿಂದ 50 ಕಿ.ಮೀ. ಗೆ ಏರಿಕೆಯಾಗಿದೆ. ಇದು 65 ಕಿ.ಮೀ.ವರೆಗೆ ತಲುಪುವ ಸಾಧ್ಯತೆಗಳಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ.
ಮಳೆಗೆ ಕಾರಣಗಳೇನು?: ಸೌರಾಷ್ಟ್ರದಿಂದ ಈಶಾನ್ಯ ಅರಬ್ಬೀ ಸಮುದ್ರದ ದಿಕ್ಕಿನಲ್ಲಿ ಕೇರಳಕ್ಕೆ ತಗ್ಗಿದ ಮೇಲ್ಮೈ ಸುಳಿಗಾಳಿ (ಟ್ರಪ್) ಬೀಸುತ್ತಿರುವುದು, ಸೌರಾಷ್ಟ್ರದ ಕಡಿಮೆ ಒತ್ತಡದ ಪ್ರದೇಶ ಮತ್ತು ಈಶಾನ್ಯ ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎದ್ದಿದ್ದು, ಸಮುದ್ರ ಮಟ್ಟದಿಂದ 7.6 ಕಿಮೀ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿದೆ. ಇದು ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ ನೈರುತ್ಯದಿಂದ ಈಶಾನ್ಯ ಅರಬ್ಬೀ ಸಮುದ್ರದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಬಂಗಾಳಕೊಲ್ಲಿಯ ಕಡಿಮೆ ಒತ್ತಡ ಪ್ರದೇಶದಲ್ಲಿ ಹಾಗೂ 23 ಡಿಗ್ರಿ ಅಕ್ಷಾಂಶದಲ್ಲಿ ಸಮುದ್ರ ಮಟ್ಟದ 3.1 ಡಿಗ್ರಿಯಿಂದ 5.8 ನಡುವೆ ಪೂರ್ವ-ಪಶ್ಚಿಮವಾಗಿ ಗಾಳಿ ಬೀಸುತ್ತಿರುವುದರಿಂದ ರಾಜ್ಯದ ಮೇಲೆ ಪರಿಣಾಮವಾಗುತ್ತಿದೆ ಎಂದು ತಿಳಿಸಿದೆ.
ಕೊಟ್ಟಿಗೆಹಾರದಲ್ಲಿ 24 ಸೆಂ.ಮೀ. ಮಳೆ :
ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಗುರುವಾರ 24 ಸೆಂ.ಮೀ. ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ-12 ಸೆಂ.ಮೀ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಚಿಕ್ಕಮಗಳೂರಿನ ಕಮ್ಮರಡಿಯಲ್ಲಿ 12 ಸೆಂ.ಮೀ., ಭಾಗಮಂಡಲ, ಪೊನ್ನಂಪೇಟೆ, ಕಳಸದಲ್ಲಿ ತಲಾ 11 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.