ಯಡ್ರಾಮಿ: ಪಟ್ಟಣದ ಹೊರ ವಲಯದಲ್ಲಿನ ಕಡಕೋಳ ಶ್ರೀ ಮಡಿವಾಳೇಶ್ವರ ಅಶ್ರಮ ಸಮೀಪದ ಹೊಲವೊಂದರಲ್ಲಿ ಮಂಗಳವಾರ ಸಾಯಂಕಾಲ ಜೋರಾದ ಮಳೆ ಸಹಿತ ಸಿಡಿಲು ಬಡಿದ ಪರಿಣಾಮ 11 ಕುರಿಗಳು ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ರಾಯಪ್ಪ ಜಟ್ಟೆಪ್ಪ ಮುಳ್ಳೊಳ್ಳಿ ಎಂಬಾತನಿಗೆ ಸೇರಿದ ಕುರಿಗಳು ಮೃತಪಟ್ಟಿವೆ.
ಈತನ ಮಗ ಸಂತೋಷ ಎನ್ನುವಾತ ಎಂದಿನಂತೆ ಮಂಗಳವಾರ 11 ಕುರಿಗಳನ್ನು ಪಟ್ಟಣದ ಸಮೀಪದ ಹೊಲದ ದಂಡೆಯಲ್ಲಿ ಮೇಯಿಸುತ್ತಿರುವಾಗ ಜೋರಾದ ಮಳೆ ಬರುತ್ತಿದ್ದಂತೆ ಜತೆಗೆ ಮಿಂಚು ಗುಡುಗಿನ ಜೋರಾದ ಸದ್ದಿಗೆ ಭಯಗೊಂಡು ಸಮೀಪದ ಶೆಡ್ ಒಂದರಲ್ಲಿ ಓಡಿ ಹೋಗಿ ಕುಳಿತಿದ್ದ. ಅಷ್ಟರಲ್ಲೆ ಕೋಲ್ಮಿಂಚಿನೊಂದಿಗೆ ಸಿಡಿಲು ಬೀಳುತ್ತಿದ್ದಂತೆ 11 ಕುರಿಗಳು ಕ್ಷಣದಲ್ಲೇ ಜೀವಬಿಟ್ಟು ನೆಲಕ್ಕುರುಳಿವೆ. ಈ ಕುರಿತಂತೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.