Advertisement

ವಡೋದರಾದಲ್ಲಿ ಮುಸಲಧಾರೆ : ಹನ್ನೆರಡು ಗಂಟೆ ಸುರಿದ ಮಳೆಗೆ ಕಕ್ಕಾಬಿಕ್ಕಿ!

09:16 AM Aug 02, 2019 | Team Udayavani |

ವಡೋದರಾ : ಬರೋಬ್ಬರಿ ಹನ್ನೆರಡು ಗಂಟೆ ಸುರಿದ ಮಳೆಗೆ ಕಕ್ಕಾಬಿಕ್ಕಿಯಾಗಿಬಿಟ್ಟಿದ್ದೆ. ಮಲೆನಾಡಿನವನಾದ ನಾನು ಇದುವರೆಗೂ ಕಾಣದಂಥ ಮಳೆ ಎಂದು ಉದ್ಘರಿಸಿದವರು ಕಲಾವಿದ ಶೈಲೇಶ್.

Advertisement

ವಡೋದರಾದ ಕಲಾಶಾಲೆಯಲ್ಲಿ ಕಲಿತು ಈಗ ದಿಲ್ಲಿಯಲ್ಲಿ ಕಲಾವಿದನಾಗಿರುವ ಶೈಲೇಶ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರು. ಎರಡು ದಿನದ ಕೆಲಸಕ್ಕೆಂದು ವಡೋದರದಲ್ಲಿರುವ ತಮ್ಮ ಸ್ಟುಡಿಯೋಗೆ ಹೋಗಿದ್ದರು.

ಬುಧವಾರ ಎಡೆಬಿಡದೇ ಸುರಿದ ಮಳೆ ವಡೋದರವನ್ನು ಮುಳುಗಿಸಿದೆ. ಮೊಸಳೆಗಳೂ ನೀರಿನಲ್ಲಿ ಹರಿದು ಮನೆ ಬಾಗಿಲಿಗೆ ಬಂದ ವಿಡಿಯೋಗಳು ವೈರಲ್ ಆಗಿವೆ.


ಸುಮಾರು 11.30 ಸಮಯ. ಸಣ್ಣಗೆ ಮಳೆ ಆರಂಭವಾಯಿತು. ಎರಡೇ ಕ್ಷಣಗಳಲ್ಲಿ ರಾಶಿ ರಾಶಿ ಸುರಿಯಲಾರಂಭಿಸಿತು. ಈಗ ನಿಲ್ಲಬಹುದು, ಇನ್ನೂ ಸ್ವಲ್ಪ ಹೊತ್ತು ಸುರಿಯಬಹುದು ಎಂದುಕೊಂಡವಷ್ಟೇ. ಆದರೆ ನಿಲ್ಲಲೇ ಇಲ್ಲ. ನಾವೆಲ್ಲಾ ಮನೆಯೊಳಗೆ ಇದ್ದವರು ಮನೆಯೊಳಗೇ. ವಿಚಿತ್ರವೆಂದರೆ, ಮನೆಯೊಳಗೂ ನೀರು ನುಗ್ಗಲಾರಂಭಿಸಿತು. ನಾನು, ನನ್ನ ಗೆಳೆಯನ ಮನೆಗೂ ನೀರು ನುಗ್ಗಿತು. ಸುಮಾರು ಒಂದರಿಂದ ಮೂರು ಅಡಿಯಷ್ಟು ನೀರು. ಏನೂ ಮಾಡದ ಅಸಹಾಯಕತೆ ಎಂದು ವಿವರಿಸುತ್ತಾರೆ ಶೈಲೇಶ್.

ಕೆಲವೇ ಗಂಟೆಗಳಲ್ಲಿ ಇಡೀ ನಗರ ನೀರಿನಲ್ಲಿ ಮುಳುಗಿತು. ಮಧ್ಯಯರಾತ್ರಿ 12 ರವರೆಗೂ ಮಳೆ ನಿಲ್ಲಲಿಲ್ಲ. ಬರೋಬ್ಬರಿ 12 ಗಂಟೆಗಳ ಕಾಲ ಸುರಿದ ಮಳೆ. ನನ್ನ ಎದುರಿನ ಪರಿಚಯಸ್ಥರ ಮನೆ ಮುಕ್ಕಾಲು ವಾಸಿ ಮುಳುಗಿತು. ಇಂದು (ಗುರುವಾರ) ಬೆಳಗ್ಗೆ ಹಾಲು ಸಿಕ್ತಾ ಇರಲಿಲ್ಲ. ವಡೋದರಾ ಬಸ್ಸು ನಿಲ್ದಾಣ ನಿನ್ನೆಯೇ ಮುಳುಗಿತ್ತು, ರೈಲುಗಳು ರದ್ದಾಗಿದ್ದವು. ಇವತ್ತು ಕೆಲವು ರೈಲುಗಳು ಓಡುತ್ತಿವೆ. ಸಮಾ ಮತ್ತು ನ್ಯೂ ಸಮಾ ಪ್ರದೇಶದಲ್ಲಂತೂ ಕೇಳುವಂತಿಲ್ಲ. ಈ ಪ್ರದೇಶದ ನಾಲ್ಕು ಸರ್ಕಲ್‌ಗಳೂ ನೀರಿನಲ್ಲಿ ಮುಳುಗಿವೆ, ಓಡಾಡುವುದೇ ಕಷ್ಟವಾಗಿದೆ ಎಂದು ಹೇಳಿದರು ಶೈಲೇಶ್.

Advertisement

ಹಾಗಾಗಿ 2.5 ಕಿ.ಮೀನ ರೈಲು ನಿಲ್ದಾಣಕ್ಕೆ 14 ಕಿ.ಮೀ ಸುತ್ತಿ ಬಳಸಿ ತಲುಪಬೇಕು. ಹೇಗಾದರೂ ಮಾಡಿ ದಿಲ್ಲಿಗೆ ತಲುಪಿಬಿಟ್ರೆ ಸಾಕೆನಿಸಿ ಬಿಟ್ಟಿದೆ. ಇಂದು ಶೈಲೇಶ್ ದಿಲ್ಲಿಗೆ ವಾಪಸಾಗುತ್ತಿದ್ದಾರೆ.

ಬುಧವಾರ ವಡೋದರಾದಲ್ಲಿ ಸುಮಾರು 400 ಮಿ.ಮೀ ಗೂ ಹೆಚ್ಚು ಮಳೆ ಸುರಿದಿದೆ. ಗುರುವಾರವೂ ಭಾರೀ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಈ ಹೊತ್ತಿನವರೆಗೆ ಹೆಚ್ಚಿನ ಮಳೆ ಇಲ್ಲ.

ಇದಲ್ಲದೇ, ಮಳೆ ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಅಜ್ವಾ ಅಟೆಕಟ್ಟಿನ 62 ಗೇಟುಗಳನ್ನು ತೆಗೆಯಲಾಗಿತ್ತು. ಆರು ಮಂದಿ ಮೃತಪಟ್ಟಿದ್ದು, ಹಲವಾರು ಪ್ರದೇಶ ಮುಳುಗಡೆಯಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next