Advertisement

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ “ಸ್ಯಾಂಡಲ್‌ವುಡ್‌”

10:08 AM Aug 10, 2019 | Sriram |

ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹಪೀಡಿತ ಸಂತ್ರಸ್ತರ ನೆರವಿಗೆ ಚಿತ್ರರಂಗದ ಕಲಾವಿದರು ಕೈ ಜೋಡಿಸಿದ್ದಾರೆ.

Advertisement

ನಟರಾದ ದರ್ಶನ್‌, ಸುದೀಪ್‌, ಗಣೇಶ್‌, ಜಗ್ಗೇಶ್‌, ದುನಿಯಾ ವಿಜಯ್‌, ಉಪೇಂದ್ರ, ಶ್ರೀಮುರಳಿ, ಪ್ರಜ್ವಲ್‌ ದೇವರಾಜ್‌, ನಿರ್ದೇಶಕ ಪವನ್‌ ಒಡೆಯರ್‌, ರಕ್ಷಿತ್‌ ಶೆಟ್ಟಿ, ಅಕುಲ್‌ ಬಾಲಾಜಿ ಸೇರಿ ಅನೇಕರು ಅಭಿಮಾನಿಗಳ ಮೂಲಕ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ.

ಕಿಚ್ಚ ಸುದೀಪ್‌ ಮನವಿ:
ಟ್ವಿಟರ್‌ನಲ್ಲಿ ವಿಡಿಯೋವೊಂದನ್ನು ಹಾಕಿರುವ ಕಿಚ್ಚ ಸುದೀಪ್‌, ನಾನು ಉತ್ತರ ಕರ್ನಾಟಕದ ಪ್ರವಾಹವನ್ನು ಫೋಟೋಗಳು ಮತ್ತು ವಿಡಿಯೋ ಮೂಲಕ ಮಾತ್ರ ನೋಡುತ್ತಿದ್ದೇನೆ. ನಮ್ಮ ಜನ ಹೇಗಿದ್ದಾರೆ, ಅಲ್ಲಿ ಏನು ನಡೀತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಸರ್ಕಾರ ಏನಾದ್ರು ಮಾಡುತ್ತೆ. ಆದ್ರೆ, ನನ್ನ ಸ್ನೇಹಿತರ ಬಳಗಕ್ಕೆ ಚಿಕ್ಕ ವಿನಂತಿ. ಅಲ್ಲೆ ಅಕ್ಕ-ಪಕ್ಕದಲ್ಲಿ ಇರುವ ಸ್ನೇಹಿತರು ಹೋಗಿ ಅವರಿಗೆ ಏನು ಸಹಾಯ ಬೇಕು, ಏನು ಅವಶ್ಯಕತೆ ಇದೆ, ತಕ್ಷಣಕ್ಕೆ ಏನು ಮಾಡಹುದು, ನಮ್ಮ ಕೈಯಲ್ಲಿ ಏನು ಮಾಡಲಿಕ್ಕೆ ಆಗುತ್ತೆ ಎಂದು ನನಗೆ ತಿಳಿಸಿ. ನಾವೆಲ್ಲರೂ ಸೇರಿ ತಕ್ಷಣ ನಮ್ಮವರಿಗೆ ಸಹಾಯ ಮಾಡೋಣ’ ಎಂದು ಅಭಿಮಾನಿಗಳು ಮತ್ತು ಸ್ನೇಹಿತರಿಗೆ ವಿನಂತಿಸಿದ್ದಾರೆ.

ಉಳಿದಂತೆ, ದುನಿಯಾ ವಿಜಯ್‌, ರಕ್ಷಿತ್‌ ಶೆಟ್ಟಿ, ಕಬೀರ್‌ ಸಿಂಗ್‌ ದುಹಾನ್‌ ಸೇರಿ ಕನ್ನಡದ ಹಲವು ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಕೂಡ ಪ್ರವಾಹ ಸಂತ್ರಸ್ತರಿಗೆ ನೆರವಾಗೋಣ, ಸಹಕರಿಸಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.

ನೆರವಿಗೆ ಧಾವಿಸಿದ ಅಭಿಮಾನಿಗಳು:
ತಮ್ಮ ನೆಚ್ಚಿನ ತಾರೆಯರ ಮಾತಿಗೆ ಸಾಥ್‌ ನೀಡಿರುವ ಅಭಿಮಾನಿಗಳು ಕೂಡ ಸಂತ್ರಸ್ತರಿಗೆ ಬಟ್ಟೆ, ಊಟ, ಸಂರಕ್ಷಿತ ಆಹಾರ, ಬೇಳೆ, ಅಕ್ಕಿ, ಬಿಸ್ಕೇಟ್‌, ಪಾದರಕ್ಷೆ, ರೈನ್‌ ಕೋಟ್‌, ಅಡುಗೆ ಎಣ್ಣೆ, ಟೂತ್‌ ಬ್ರಶ್‌, ಪೇಸ್ಟ್‌, ನೀರಿನ ಬಾಟಲಿ, ಜನರಲ್‌ ಮೆಡಿಸಿನ್‌, ಸಾಬೂನು, ಟೆಟ್ರಾ ಪ್ಯಾಕ್‌ ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ.

Advertisement

ಉಪೇಂದ್ರರಿಂದ 5 ಲಕ್ಷ ರೂ.ದೇಣಿಗೆ:
ನಟ ಉಪೇಂದ್ರ ಅವರು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 5 ಲಕ್ಷ ರೂ.ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಉಪೇಂದ್ರ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

ರೆಮೋ ಚಿತ್ರತಂಡದಿಂದ ನೆರವು:
ರೆಮೋ’ ಚಿತ್ರದ ನಿರ್ದೇಶಕ ಪವನ್‌ ಒಡೆಯರ್‌ ಮತ್ತು ನಾಯಕ ವಿಹಾನ್‌ ಸೇರಿ ಇಡೀ ಚಿತ್ರತಂಡ, ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನರಿಗೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಹಳ್ಳಿಗಳ ಜನರಿಗೆ ಅಗತ್ಯ ಸಾಮಗ್ರಿಗಳ ಅವಶ್ಯಕತೆ ಇದೆ. ನಮ್ಮ ಡಿ ಕಂಪನಿ’ ಬಳಗದಿಂದ ಅಳಿಲು ಸೇವೆ ಮುಂದುವರಿಸೋಣ. ತಮ್ಮ ಕೈಲಾದ ಸಹಾಯದೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಿ.
– ನಟ ದರ್ಶನ್‌ ಟ್ವೀಟ್‌

ಕರ್ನಾಟಕದ ನೆಲವನ್ನು ಬಹುಪಾಲು ಜಲ ಆವರಿಸಿಕೊಂಡಿದೆ. ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯ. ನಮ್ಮಿಂದ ಸಾಧ್ಯವಾದದ್ದನ್ನು ನೆರೆ ಸಂತ್ರಸ್ತರಿಗೆ ತಲುಪಿಸೋಣ.
– ನಟ ಗಣೇಶ್‌.

ಬನ್ನಿ, ಒಬ್ಬರಿಗೊಬ್ಬರು ಕೈ ಜೋಡಿಸಿ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಹಾಯ ಮಾಡೋಣ. ವಿಶ್ವದ ಎಲ್ಲೆಡೆ ಇರುವ ಕನ್ನಡಿಗರೇ, ಉತ್ತರ ಕರ್ನಾಟಕದ ಬಂಧುಗಳ ರಕ್ಷಣೆಗೆ ವ್ಯಾಪಕ ಪ್ರಚಾರಮಾಡಿ. ಕಷ್ಟದಲ್ಲಿ ಮೊದಲು ಆಗುವವನೇ ಕನ್ನಡದ ನೆಂಟ ಎಂದು ನಿರೂಪಿಸುವ.
– ನಟ ಜಗ್ಗೇಶ್‌.

Advertisement

Udayavani is now on Telegram. Click here to join our channel and stay updated with the latest news.

Next