ಮಂಗಳೂರು/ ಬೆಳ್ತಂಗಡಿ/ ಉಡುಪಿ : ಬೆಳ್ತಂಗಡಿ, ಬಂಟ್ವಾಳ, ಕಡಬ, ಸುಳ್ಯ, ಪುತ್ತೂರು, ಉಡುಪಿ, ಮಣಿಪಾಲ, ಕಾರ್ಕಳ ಸೇರಿದಂತೆ ಉಭಯ ಜಿಲ್ಲೆಯ ಕೆಲವು ಕಡೆಗಳಲ್ಲಿ ಶನಿವಾರ ಮಳೆಯಾಗಿದೆ. ತುಳಸಿ ಪೂಜೆಯ ಸಂಭ್ರಮಕ್ಕೆ ಕೆಲವು ಕಡೆಗಳಲ್ಲಿ ಸ್ವಲ್ಪ ಕಾಲ ಮಳೆ ತಡೆಯೊಡ್ಡಿತು.
ಮಂಗಳೂರಿನಲ್ಲಿ 33.3 ಡಿ.ಸೆ. ಗರಿಷ್ಠ ಮತ್ತು 23.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಶನಿವಾರ ಸಂಜೆ 5.30ರ ಬಳಿಕ 7 ಗಂಟೆವರೆಗೆ ಇದ್ದಕ್ಕಿದ್ದಂತೆ ಮೋಡ ಕವಿದು ಸಿಡಿಲು, ಮಿಂಚು ಗುಡುಗು ಸಹಿತ ಒಂದು ತಾಸಿಗೂ ಅಧಿಕ ಕಾಲ ಭಾರೀ ಮಳೆ ಸುರಿದಿದೆ. ರಸ್ತೆಗಳಲ್ಲಿ ಧಾರಾಕಾರವಾಗಿ ನೀರು ಹರಿದಿದ್ದು, ಬೆಳ್ತಂಗಡಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಹೊಂಡ ಗುಂಡಿಗಳಿಗೆ ಹಾಕಲಾರಂಭಿಸಿದ ಡಾಮರು ಕಾಮಗಾರಿಗೆ ತೊಂದರೆಯಾಗಿದೆ. ಗ್ರಾಮೀಣ ಭಾಗಗಳ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಬೆಳ್ತಂಗಡಿ ತಾಲೂಕು ಭಾಗದ ರಸ್ತೆಗಳಲ್ಲೇ ಮಳೆ ನೀರು ಹರಿದು ವಾಹನ ಸವಾರರು ತೊಂದರೆ ಅನುಭವಿಸಿದರು. ತುಳಸಿ ಪೂಜೆಯ ಸಂಭ್ರಮಕ್ಕೂ ಮಳೆ ಕೊಂಚ ಅಡ್ಡಿಯುಂಟು ಮಾಡಿತು.
ಸಿಡಿಲು ಬಡಿದು ಮನೆಗೆ ಹಾನಿ
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಅವರ ಮನೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಮನೆಯಲ್ಲಿ ಹರೀಶ ಅವರ ಪತ್ನಿ, ಮಕ್ಕಳು, ತಂದೆ, ತಾಯಿ ಅಪಾಯದಿಂದ ಪಾರಾಗಿದ್ದಾರೆ. ರಾತ್ರಿ ಭಾರೀ ಮಳೆ ಸುರಿದಿದ್ದು, ಮೊದಲಿಗೆ ಮನೆ ಹಿಂಬದಿಯ ಮರವೊಂದಕ್ಕೆ ಬಡಿದ ಸಿಡಿಲು ಬಳಿಕ ಗೋಡೆಯನ್ನು ಸೀಳಿಕೊಂಡು ಮನೆಗೆ ನುಗ್ಗಿತು. ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗಿವೆ. ಇದನ್ನು ಕಂಡ ಹರೀಶ ಆಚಾರ್ಯ ಅವರ ಪುಟ್ಟ ಮಗು ಸಹಿತ ತಂದೆ, ತಾಯಿ ಆಘಾತಗೊಂಡಿದ್ದಾರೆ. ಗೋಡೆ ಮತ್ತು ಹೆಂಚಿನ ಮಾಡು ಸಂಪೂರ್ಣ ಹಾನಿಗೀಡಾಗಿದ್ದು, ಕುಸಿತದ ಭೀತಿ ಇದೆ. ಗ್ರಾಮ ಕರಣಿಕ ಪರೀಕ್ಷಿತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದರು.