ಉಡುಪಿ: ಜಿಲ್ಲಾದ್ಯಂತ ಎರಡು ದಿನಗಳಿಂದ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ಗುರುವಾರ ಮುಂಜಾನೆ ನಿರಂತರವಾಗಿ ಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ಮರಗಳು ಬಿದ್ದಿದ್ದು, ಕೆಲವು ಕಡೆಗಳಲ್ಲಿ ದಿನವಿಡೀ ವಿದ್ಯುತ್ ವ್ಯತ್ಯಯವಾಗಿದೆ.
ಜಿಲ್ಲೆಯ ಕಡಲಿನ ಪ್ರಕ್ಷುಬ್ಧ ವಾತಾವರಣ ಮುಂದುವರಿದಿದ್ದು, ಶಿರೂರು, ಉಪ್ಪುಂದ, ಕೊಡೇರಿ, ಮರವಂತೆ, ಕೋಡಿ ಕನ್ಯಾನ, ಮಲ್ಪೆ, ಕಾಪು, ಪಡುಬಿದ್ರಿ ಹಾಗೂ ಹೆಜಮಾಡಿಯ ಕಡಲು ತೀರದ ಗ್ರಾಮಗಳಲ್ಲಿ ಕಡಲ್ಕೊರೆತದ ಆತಂಕ ಮುಂದುವರಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಜು. 27ರ ವರೆಗೂ ಸಮುದ್ರದಿಂದ ತೀವ್ರ ಗಾಳಿ ಬೀಸುವ ಮುನ್ಸೂಚನೆಯಿದೆ.
ಕುಂದಾಪುರ ತಾಲೂಕಿನಲ್ಲಿ ಮನೆ, ಕೃಷಿ ಭೂಮಿಗೆ ವ್ಯಾಪಕ ಹಾನಿ ಸಂಭವಿಸಿದೆ. ಕಾಪು, ಉಡುಪಿ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಹೆಬ್ರಿ ಭಾಗದಲ್ಲಿ ಮಳೆ ಸುರಿದಿದ್ದು, ಗುರುವಾರ ಕುಂದಾಪುರ, ಹೆಬ್ರಿ, ಬೈಂದೂರು, ಕಾರ್ಕಳ ತಾಲೂಕಿನ ತಹಶೀಲ್ದಾರ್ ಮುಂಜಾಗ್ರತ ಕ್ರಮವಾಗಿ ಗುರುವಾರ ಬೆಳಗ್ಗೆ ಅಂಗನ ವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿವರೆಗೆ ರಜೆ ಘೋಷಿಸಿದರು. ಶುಕ್ರವಾರ ಮಳೆ ಪರಿಸ್ಥಿತಿ ನೋಡಿ ಕೊಂಡು ರಜೆ ನೀಡುವ ಬಗ್ಗೆ ನಿರ್ಧರಿ ಸಲಾಗುವುದು ಎಂದು ಆಯಾ ತಾಲೂಕಿನ ತಹಶೀಲ್ದಾರ್ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ 48 ಮನೆಗಳಿಗೆ ಹಾನಿಯಾಗಿದ್ದು, 10 ಮಂದಿ ಕೃಷಿಕರ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಗಾಳಿ ಮಳೆಗೆ ಒಟ್ಟು 58 ಮನೆಗಳಿಗೆ ಹಾನಿ ಸಂಭವಿಸಿದೆ. ಮಳೆಯಿಂದಾಗಿ ನಗರ, ಗ್ರಾಮಾಂತರ ರಸ್ತೆ ಮತ್ತು ಮೂಲ ಸೌಕರ್ಯಗಳಿಗೆ ಸಾಕಷ್ಟು ಹಾನಿಯಾಗಿದೆ. ಹಾನಿಗೀಡಾದ ರಸ್ತೆಗಳನ್ನು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಪರಿಶೀಲಿಸಿದರು.
ದಿನವಿಡೀ ಕೈಕೊಟ್ಟ ವಿದ್ಯುತ್
ಹಲವು ಭಾಗಗಳಲ್ಲಿ ದಿನವಿಡೀ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಜನರು ಪರದಾಡುವಂತಾಯಿತು. ಗ ಜಿಲ್ಲೆಯಲ್ಲಿ 130ಕ್ಕೂ ಅಧಿಕ ವಿದ್ಯುತ್ ಕಂಬಗಳು, 1.82 ಕಿ.ಮೀ. ವಿದ್ಯುತ್ ತಂತಿ, 7 ವಿದ್ಯುತ್ ಪರಿವರ್ತಕಗಳಿಗೆ ಹಾನಿ ಸಂಭವಿಸಿದ್ದು, 24.16 ಲಕ್ಷ ರೂ. ನಷ್ಟವಾಗಿದೆ. ಮೆಸ್ಕಾಂ ಸಿಬಂದಿ ನಿರಂತರ ನಿರ್ವಹಣೆಯಲ್ಲಿ ತೊಡಗಿಸಿದ್ದು, ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಸಾಧ್ಯವಾದ ಕಡೆಗಳಲ್ಲಿ ಪರ್ಯಾಯ ಸಂಪರ್ಕ ಕಲ್ಪಿಸಿ ನಿರಂತರ ವಿದ್ಯುತ್ ಪೂರೈಕೆಗೆ ಶ್ರಮಿಸ ಲಾಗುತ್ತಿದೆ ಎಂದು ಮೆಸ್ಕಾಂ ತಿಳಿಸಿದೆ.
ಇದನ್ನೂ ಓದಿ: Mangaluru: ತಿಂಗಳೊಳಗೆ ಗೋಹತ್ಯೆ ತಡೆಯದಿದ್ದರೆ ಪ್ರತಿಭಟನೆ