ಹೊಸನಗರ: ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.
ಕಳೆದ ಮೂರ್‍ನಾಲ್ಕು ದಿನಗಳಿಂದ ಮಳೆ ಹೆಚ್ಚಿದ್ದು ಸೋಮವಾರ ಬೆಳಗ್ಗೆಯಿಂದಲೇ ತೀವ್ರ ಮಳೆ ಮಧ್ಯಾಹ್ನದವರೆಗೂ ಸುರಿದು ತನ್ನ ರುದ್ರಾವತಾರ ಪ್ರದರ್ಶಿಸಿದೆ.
ತಾಲೂಕಿನ ನಗರ ಹೋಬಳಿ ಸೇರಿದಂತೆ ಹುಂಚಾ, ಕೆರೆಹಳ್ಳಿ, ಕಸಭಾ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.
ಮಳೆ ರಭಸಕ್ಕೆ ರಸ್ತೆಗಳ ಇಕ್ಕೆಲಗಳ ಚರಂಡಿಗಳು ಕಟ್ಟಿದ್ದು, ನೀರು ರಸ್ತೆ ಮೇಲೆ ಹರಿದಿದೆ. ಕೆಲವೆಡೆಗಳಲ್ಲಿ ಆಳೆತ್ತರ ನೀರು ನಿಂತಿತ್ತು. ನಗರ -ನಿಟ್ಟೂರು ಮಾರ್ಗದ ರಸ್ತೆಯಲ್ಲಿ ಚರಂಡಿಯಲ್ಲಿ ನೀರು ಹರಿಯದೆ ರಸ್ತೆಯಲ್ಲಿಯೇ ಹರಿಯುತ್ತಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಆಗಿದೆ. ಹಲವೆಡೆಗಳಲ್ಲಿ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ.
ಮುಖ್ಯರಸ್ತೆಗೆ ನುಗ್ಗಿದ ನೀರು: ಬೆಳಗ್ಗೆ ಪಟ್ಟಣದ ಮುಖ್ಯರಸ್ತೆ ಶಿವಮೊಗ್ಗ ರಸ್ತೆಯಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ರಸ್ತೆ ಹೊಳೆಯೋಪಾದಿಯಲ್ಲಿ ಹರಿದಿದೆ. ಇಲ್ಲಿನ ಒಳ ಚರಂಡಿ ಕಟ್ಟಿಕೊಂಡ ಪರಿಣಾಮ ಒಮ್ಮೆಲೆ ಸುರಿದ ಮಳೆ ನೀರು ರಸ್ತೆಗೆ ನುಗ್ಗಿದೆ. ಇದರಿಂದ ರಸ್ತೆ ತುಂಬಾ ನೀರೋ ನೀರು ಎಂಬಂತಾಗಿತ್ತು. ವಾಹನ ಸವಾರರು ನಿಂತ ನೀರಲ್ಲೆ ವಾಹನ ಚಲಾಯಿಸಿಕೊಂಡು ಹೋಗಬೇಕಾಗಿತ್ತು.
ಹೀಗೆ ರಸ್ತೆಯಲ್ಲಿ ಸಾಕಷ್ಟು ನೀರು ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾದದನ್ನು ಕೆಲವರು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರು. ಇದು ಎಲ್ಲೆಡೆ ವೈರಲ್ ಆಗಿದ್ದು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಜನತೆ ಹಿಡಿಶಾಪ ಹಾಕಿದ್ದಾರೆ.