ಸುಳ್ಯ: ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಭಾರೀ ಗಾಳಿ-ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದೆ.
ಮಂಗಳವಾರ ದಿನವಿಡೀ ಬಿಸಿಲಿನಿಂದ ಕೂಡಿದ್ದು, ರಾತ್ರಿಯಾಗುತ್ತಲೇ ಗುಡುಗು ಸಹಿತ ಮಳೆಯಾಗಿದೆ. ಕೆಲವು ಪ್ರದೇಶದಲ್ಲಿ ಭಾರೀ ಗಾಳಿ ಬೀಸಿದ ಪರಿಣಾಮ ತೋಟದಲ್ಲಿ ಮರಗಳು ಮುರಿದುಬಿದ್ದಿವೆ.
ಸುಳ್ಯ ತಾಲೂಕಿನ ನಿಂತಿಕಲ್ಲು ಪೇಟೆಯ ವನದುರ್ಗೆ ದೇವಾಲಯ ಸಮೀಪದಲ್ಲಿ ಹೊಳೆಯ ನೀರು ಅಂಗಡಿಗಳಿಗೆ ನೀರು ನುಗ್ಗಿದೆ. ಕಲ್ಲೇರಿಯಲ್ಲಿ ಮನೆಯಂಗಳಕ್ಕೂ ನೀರು ನುಗ್ಗಿದೆ. ಪಂಜ-ಸುಬ್ರಹ್ಮಣ್ಯ ಹೆದ್ದಾರಿಯ ಪಂಜ ಸಮೀಪದ ಬೊಳ್ಮಲೆಯಲ್ಲಿ ನೀರು ಹೆದ್ದಾರಿಯಲ್ಲೇ ಹರಿದ ಪರಿಣಾಮ ವಾಹನ ಸಂಚಾರ ವ್ಯತ್ಯಯವಾಯಿತು. ಸಂಪಾಜೆಯ ಚೌಕಿಯಲ್ಲಿ ಬಾವಿಯ ತಡೆಗೋಡೆ ಕುಸಿತವಾಗಿದೆ.
ಪಂಜ ಪೇಟೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಪಂಜ ಹಾಲು ಉತ್ಪಾದಕರ ಸೊಸೈಟಿಯ ಗೋದಾಮಿಗೆ ನುಗ್ಗಿದ್ದು, ಅಲ್ಲಿ ಸಂಗ್ರಹಿಸಲಾಗಿದ್ದ ಪಶು ಆಹಾರಕ್ಕೆ ಹಾನಿಗೀಡಾಗಿದೆ. ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಪಂಜ ಸಮೀಪದ ಕರಿಕ್ಕಳದಲ್ಲಿ ರಸ್ತೆ ಬದಿ ಮರ ಬಿದ್ದು ವಿದ್ಯುತ್ ಲೈನ್‌ಗೆ ಹಾನಿಯಾಗಿದೆ. ಕರಿಕ್ಕಳದಿಂದ ಪುತ್ಯ ತನಕ ಹಲವೆಡೆ ರಸ್ತೆ ಬದಿ ಮಣ್ಣು ಕುಸಿದಿದೆ. ಬಾಳಿಲ ಗ್ರಾಮದ ಪೊಸೋಡು ಧನಂಜಯ ಅವರ ಮನೆಯೊಳಗೆ ನೀರು ನುಗ್ಗಿದೆ. ಸಂಪಾಜೆ ಗ್ರಾಮದ ಗೂಮಡ್ಕ ಬೈಲೆಯಲ್ಲಿ ಪುಷ್ಪಾವತಿ ಅವರ ಮನೆ ಹಿಂಭಾಗದ ಬರೆ ಕುಸಿದಿದೆ. ಅಮರಪಟ್ನೂರು ಗ್ರಾಮದ ಪೋನಡ್ಕ ಕೆ.ಬಿ.ನಾಯ್ಕ ಅವರ ಮನೆ ಸಮೀಪದ ಶೆಡ್‌ಗೆ ಬರೆ ಕುಸಿದು ಬಿದ್ದು, ಕಾರು ಜಖಂಗೊಂಡಿದೆ.
ಕಡಬ ತಾಲೂಕಿನ ಎಡಮಂಗಲದಲ್ಲಿ ವಿಜಯ ಕುಮಾರ್ ಮಾಲೆಂಗಿರಿ ಅವರ ಮನೆ ಸಮೀಪದ ಬರೆ ಕುಸಿದಿದ್ದು, ಅವರ ಕೆಲವು ಅಡಿಕೆ ಮರಗಳು ಮುರಿದುಬಿದ್ದಿವೆ. ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿಕ ತಡೆಗೋಡೆ ಕುಸಿದು ಬಿದ್ದಿದೆ. ಆಸ್ಪತ್ರೆ ಕಟ್ಟಡವರೆಗೂ ಕುಸಿತ ಭೀತಿ ಉಂಟಾಗಿದ್ದು, ಕಟ್ಟಡಕ್ಕೂ ಅಪಾಯ ಸ್ಥಿತಿ ನಿರ್ಮಾಣವಾಗಿದೆ. ಪಂಜದ ಪಾಂಡಿಗದ್ದೆ ಶಾಲಾ ಆವರಣ ಗೋಡೆ ಕುಸಿದು ಬಿದ್ದಿದೆ. ಪಂಬೆತ್ತಾಡಿ ಗ್ರಾಮದ ಜಾಕೆ ಜಯರಾಮ ಅವರ ಮನೆಗೆ ಬರೆ ಕುಸಿದು ಹಾನಿಯಾಗಿದೆ. ನಿಂತಿಕಲ್ಲು ಸಮೀಪ ಸಂಚರಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.