Advertisement
ಈ ಬಾರಿ ಆದ್ರ್ರಾ, ಪುನರ್ವಸು, ಪುಷ್ಯಾ ನಕ್ಷತ್ರಗಳಲ್ಲಿ ನಿರೀಕ್ಷಿತ ಮಳೆ ಸುರಿದಿಲ್ಲ. ಆದರೆ ಆ. 3ರಿಂದ ಆಶ್ಲೇಷಾ ನಕ್ಷತ್ರ ಆರಂಭಗೊಂಡಿದ್ದು, ಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಆ. 5ರ ರಾತ್ರಿಯಿಂದ ನಿರಂತರ ಮಳೆಯಾಗಿದೆ.
Related Articles
Advertisement
ಪಾಣಾಜೆ ಕಡೆಗೆ ಸಾಗುವ ಬಸ್ಸು, ಇತರ ವಾಹನಗಳು ಸಂಟ್ಯಾರು ಮೂಲಕ ಪರ್ಯಾಯ ರಸ್ತೆಯನ್ನು ಬಳಸಿಕೊಂಡು ಸಂಚಾರ ನಡೆಸಿವೆ. ಬಡಗನ್ನೂರು ಗ್ರಾಮದ ಪಟ್ಟೆ-ಮುಂಡೋಳೆ ಸಂಪರ್ಕ ರಸ್ತೆಯ ಮುಂಡೋಳೆ ಸಮೀಪದ ಹೋಳೆಯ ಮಧ್ಯೆ ಸಾಗುವ ರಸ್ತೆ ಮುಳುಗಡೆಯಾಗಿದೆ.
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯದಲ್ಲಿ ರಸ್ತೆ ಬದಿ ಚರಂಡಿಯಲ್ಲಿ ನೀರು ಸರಿಯಾಗಿ ಹರಿಯದ ಕಾರಣದ ರಸ್ತೆಯಲ್ಲಿ ನೀರು ನಿಂತು ಹಲವು ಹೊತ್ತಿನ ಕಾಲ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ತಾಲೂಕು ವ್ಯಾಪ್ತಿಯ ದೊಡ್ಡ ಪ್ರಮಾಣದ ಹಾನಿ ಉಂಟಾಗಿಲ್ಲ ಎಂದು ತಹಶೀಲ್ದಾರ್ ಅನಂತ ಶಂಕರ್ ತಿಳಿಸಿದ್ದಾರೆ.
ಮೆಸ್ಕಾಂಗೆ 20 ಲಕ್ಷ ರೂ. ನಷ್ಟ
ಗಾಳಿ ಸಹಿತ ಮಳೆಗೆ ಮೆಸ್ಕಾಂ ಪುತ್ತೂರು ವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಕಡಬ ತಾಲೂಕು ವ್ಯಾಪ್ತಿಯಲ್ಲಿ 75ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಬೆಟ್ಟಂಪಾಡಿ ಹಾಗೂ ಗುತ್ತಿಗಾರಿನಲ್ಲಿ 2 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಅಂದಾಜು 20 ಲಕ್ಷ ರೂ. ನಷ್ಟವಾಗಿದ್ದು, ವಿದ್ಯುತ್ ಮರುಜೋಡಣೆ ಕಾರ್ಯ ನಡೆಸಲಾಗುತ್ತಿದೆ ಎಂದು ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ನರಸಿಂಹ ತಿಳಿಸಿದ್ದಾರೆ.
ತೋಡಿನಂತಾದ ಮುಖ್ಯ ರಸ್ತೆ
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ನಗರದ ಮುಖ್ಯ ರಸ್ತೆಯ ಪೈಚಾರು, ಹಳೆಗೇಟು, ಮೊಗರ್ಪಣೆ, ಜ್ಯೋತಿ ಸರ್ಕಲ್, ಜೂನಿಯರ್ ಕಾಲೇಜು ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪ್ರವೇಶ ದ್ವಾರ, ಗಾಂಧಿನಗರ, ಜಟ್ಟಿಪಳ್ಳ ತಿರುವು, ಪರಿವಾರಕಾನ ಹೀಗೆ ನಗರದ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಹರಿದು ತೋಡಿನ ಸ್ವರೂಪ ಪಡೆಯಿತು. ವಾಹನ ಸವಾರರು ಸಂಚಾರಕ್ಕೆ ತಡಕಾಡಿದರು.
ಮಳೆ ಪ್ರಮಾಣ
ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನ ವರೆಗಿನ 24 ಗಂಟೆಗಳ ಅವಧಿಯಲ್ಲಿ ಪುತ್ತೂರು ನಗರದಲ್ಲಿ 155 ಮಿ.ಮೀ., ಉಪ್ಪಿನಂಗಡಿಯಲ್ಲಿ 154.2 ಮಿ.ಮೀ., ಶಿರಾಡಿಯಲ್ಲಿ 142.8 ಮಿ.ಮೀ., ಕೊೖಲದಲ್ಲಿ 143.4 ಮಿ.ಮೀ., ಐತೂರುನಲ್ಲಿ 133.3 ಮಿ.ಮೀ., ಕಡಬದಲ್ಲಿ 128.2 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ ಒಟ್ಟು 856.6 ಮಿ.ಮೀ. ಮಳೆಯಾಗಿದೆ. ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲಿ ಮಂಗಳವಾರ ಬೆಳಗ್ಗೆ 21 ಮೀ. ನೀರಿನ ಮಟ್ಟ ದಾಖಲಾಗಿದೆ.
ವಿದ್ಯಾರ್ಥಿಗಳ ಪರದಾಟ
ಜಟ್ಟಿಪಳ್ಳ – ಕೊಡಿಯಾಲಬೈಲು ರಸ್ತೆಯ ಹಲವೆಡೆ ಚರಂಡಿ ಸಮಸ್ಯೆ ಕಾರಣ ರಸ್ತೆಯೇ ತೋಡಿನ ಸ್ಥಿತಿ ಉಂಟಾಗಿತ್ತು. ಮಳೆ ನೀರು ರಸ್ತೆಗೆ ನುಗ್ಗಿ ಬೀಡುಬಿಟ್ಟಿತ್ತು. ಕೊಡಿಯಾಲಬೈಲು ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಅಕ್ಷರಶಃ ಪರದಾಟ ನಡೆಸಿದರು. ಹೊಳೆ ಸ್ವರೂಪ ಪಡೆದಿದ್ದ ರಸ್ತೆಯಲ್ಲೇ ಸಾಗಬೇಕಾದ ಅನಿವಾರ್ಯ ಉಂಟಾಗಿತ್ತು.