Advertisement

ವರುಣನ ರುದ್ರನರ್ತನಕ್ಕೆ ಬೆಚ್ಚಿದ ಉತ್ತರ

12:56 AM Jul 17, 2019 | Team Udayavani |

ಕರ್ನಾಟಕದ ಮೇಲೆ ಮಳೆರಾಯ ಮುನಿಸಿಕೊಂಡಿದ್ದರೂ ಅತ್ತ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ತ್ರಿಪುರ ಹಾಗೂ ಮಿಜೋರಾಂನಲ್ಲಿ “ಮುಸಲಧಾರೆ’ ಸುರಿಸುತ್ತಿದ್ದಾನೆ. ಇದರಿಂದಾಗಿ ಅಲ್ಲಿ ಪ್ರವಾಹ ವಿಕೋಪ ಉಂಟಾಗಿದ್ದು, ಅನೇಕ ಸಾವು-ನೋವು ಸಂಭವಿಸಿವೆ. ಲಕ್ಷಾಂತರ ಜನರು ಆಶ್ರಯ ಕಳೆದುಕೊಂಡು ಪರದಾಡುವಂತಾಗಿದೆ. ಇತ್ತ, ಕೇರಳದಲ್ಲಿ ಮುಂದಿನ ಕೆಲವು ದಿನ ಧಾರಾಕಾರ ಮಳೆ ಬೀಳುವುದಾಗಿ ಹವಾಮಾನ ಇಲಾಖೆ ಹೇಳಿರುವುದರಿಂದ ಆರು ಜಿಲ್ಲೆಗಳಿಗೆ “ರೆಡ್‌ ಅಲರ್ಟ್‌’ ನೀಡಲಾಗಿದೆ. ನೆರೆಯ ಪಾಕಿಸ್ಥಾನ, ನೇಪಾಲದಲ್ಲೂ ಪ್ರವಾಹ ಉಂಟಾಗಿ ಸಾವು-ನೋವಿಗೆ ಕಾರಣವಾಗಿದೆ. ಒಟ್ಟಾರೆಯಾಗಿ ಮಳೆರಾಯ ಆಯ್ದ ಕಡೆಗಳಲ್ಲಿ ರುದ್ರತಾಂಡವ ಆಡುತ್ತಿದ್ದಾನೆ.

Advertisement

ಕೇರಳದಲ್ಲಿ ರೆಡ್‌ ಅಲರ್ಟ್‌
ಕಳೆದ ವರ್ಷವಷ್ಟೇ ಮುಸಲಧಾರೆಯ ಮಳೆ ಹಾಗೂ ಆನಂತರದ ಪ್ರವಾಹದಿಂದ ತತ್ತರಿಸಿದ್ದ ಕೇರಳಕ್ಕೆ ಈ ಬಾರಿ ಪುನಃ ಅದೇ ಅಪಾಯದ ಭೀತಿ ಆವರಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಕೇರಳದೆಲ್ಲೆಡೆ ತೀವ್ರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ವಿಕೋಪ ನಿರ್ವಹಣ ಆಯೋಗವು, ರಾಜ್ಯದ ಎಲ್ಲ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಐಎಂಡಿ ಮಾಹಿತಿಯ ಮೇರೆಗೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಇಡುಕ್ಕಿ, ಮಲಪ್ಪುರಂ, ವಯನಾಡ್‌ ಹಾಗೂ ಕಣ್ಣೂರು, ಎರ್ನಾಕುಳಂ ಹಾಗೂ ತೃಶ್ಶೂರ್‌ಗಳಲ್ಲಿ ಜು. 18ರಿಂದ 20ರ ವರೆಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಿಗೆ ಕಿತ್ತಳೆ ಹಾಗೂ ಹಳದಿ ಅಲರ್ಟ್‌ ನೀಡಲಾಗಿದೆ.

25.71 ಲಕ್ಷ ಜನರಿಗೆ ತೊಂದರೆ: ನಿತೀಶ್‌
ಬಿಹಾರದ 16 ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, 25.71 ಲಕ್ಷ ಜನರಿಗೆ ತೊಂದರೆಯಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ. “199 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 1.16 ಲಕ್ಷ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. 676 ಸಮುದಾಯಗಳಿಗೆ ಅಡುಗೆ ಮನೆಗಳನ್ನು ನಿರ್ಮಿಸಲಾಗಿದ್ದು ನಿರಾಶ್ರಿತರಿಗೆ ಆಹಾರ ಒದಗಿಸಲಾಗುತ್ತಿದೆ. ಕಾಯಿಲೆಗಳನ್ನು ತಡೆಗಟ್ಟಲೂ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಪಿಒಕೆಯಲ್ಲಿ 28 ಸಾವು
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ (ಪಿಒಕೆ), ನೀಲಂ ಕಣಿವೆಯಲ್ಲಿ ಮೇಘಸ್ಫೋಟ ಉಂಟಾದ ಪರಿಣಾಮ, ಭಾರೀ ಮಳೆ ಹಾಗೂ ಆನಂತರ ಉಂಟಾದ ಹಠಾತ್‌ ಪ್ರವಾಹದಿಂದಾಗಿ 28 ಜನರು ಸಾವನ್ನಪ್ಪಿದ್ದಾರೆ. ಲಾಸ್ವಾ ಪ್ರಾಂತ್ಯದ 150 ಮನೆಗಳು, ಎರಡು ಮಸೀದಿಗಳು ಕೊಚ್ಚಿಹೋಗಿವೆ. ಪಾಕಿಸ್ಥಾನ ಸೇನೆಯು ಏರ್‌ಲಿಫ್ಟ್ ಮೂಲಕ 52 ಜನರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದೆ.

ಕಾಜಿರಂಗದಲ್ಲಿ ಪಹರೆ
ಶೇ. 90ರಷ್ಟು ಜಲಾವೃತವಾಗಿರುವ “ಕಾಜಿರಂಗ’ ರಾಷ್ಟ್ರೀಯ ಉದ್ಯಾನವನದಲ್ಲಿ, ಪ್ರಾಣಿಗಳ ಕಳ್ಳಸಾಗಣೆ ಯನ್ನು ತಪ್ಪಿಸಲು ಅಸ್ಸಾಂ ಅರಣ್ಯ ಇಲಾಖೆ ಕೈಗೊಂಡಿದ್ದ ಕ್ರಮಗಳು ನೀರು ಪಾಲಾಗಿವೆ. ಆದರೂ, ಪ್ರಯತ್ನ ಬಿಡದ ಇಲಾಖೆ ಸಿಬಂದಿ ನೀರು ತುಂಬಿರುವ ಉದ್ಯಾನವನದಲ್ಲೇ ಮೋಟಾರು ದೋಣಿಗಳಲ್ಲಿ ಹಗಲಿರುಳೆನ್ನದೆ ಪಹರೆ ಕಾಯುತ್ತಾ, ಕಳ್ಳಕಾಕರಿಂದ ಪ್ರಾಣಿಗಳಿಗೆ ತೊಂದರೆಯಾಗ ದಂತೆ ಎಚ್ಚರಿಕೆ ವಹಿಸಿದ್ದಾರೆ. ರಾಷ್ಟ್ರೀಯ ಉದ್ಯಾನದೊಳಗೆ ಪ್ರಯಾಣಿಕರ ವಾಹನಗಳನ್ನು ನಿಷೇಧಿಸಲಾಗಿದೆ. ಅಸ್ಸಾಂನಲ್ಲಿ 33 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ.

Advertisement

ರಾಹುಲ್‌ ಕರೆ
ಪ್ರವಾಹ ಪೀಡಿತ ರಾಜ್ಯಗಳಾದ ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ತ್ರಿಪುರ ಹಾಗೂ ಮಿಜೋರಾಂಗಳಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಎಲ್ಲ ರಾಜ್ಯಗಳ ಕಾಂಗ್ರೆಸ್‌ ಕಾರ್ಯಕರ್ತರಿಗೆ ಪಕ್ಷದ ನಾಯಕ ರಾಹುಲ್‌ ಗಾಂಧಿ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next