Advertisement

ನಾಸಿಕ್‌ನಲ್ಲಿ  ಭಾರೀ ಮಳೆ: ಮೂರು ಸಾವು

06:00 AM Aug 18, 2018 | Team Udayavani |

ನಾಸಿಕ್‌: ಹಲವು ದಿನಗಳ ವಿರಾಮದ ಬಳಿಕ ಉತ್ತರ ಮಹಾರಾಷ್ಟ್ರದ ನಾಸಿಕ್‌ ನಗರ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶ, ಯವತ್ಮಾಳ್‌, ನಂದೂರ್‌ ಬಾರ್‌ನಲ್ಲಿ ಮಳೆಯ ಪುನರಾಗಮನ ವಾಗಿದೆ. ನಂದೂರ್‌ಬಾರ್‌ನಲ್ಲಿ ಮೂವರು ಸಾವನ್ನಪ್ಪಿ, 6 ಮಂದಿ ನಾಪತ್ತೆಯಾಗಿದ್ದಾರೆ. ನಾಸಿಕ್‌ ನಗರ ಮತ್ತು ಜಿಲ್ಲೆಯ ಎಲ್ಲ 14 ತಾಲೂಕುಗಳಲ್ಲಿ ಗುರುವಾರದಿಂದ ಉತ್ತಮ ಮಳೆಯಾಗುತ್ತಿದೆ. 

Advertisement

ನೀರು ಬಿಡುಗಡೆ
ಅಣೆಕಟ್ಟು ಪ್ರದೇಶಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯು ದರ್ನಾ ಅಣೆಕಟ್ಟಿನಿಂದ 4,172 ಕ್ಯೂಸೆಕ್‌ ಮತ್ತು ಗಂಗಾಪುರ ಅಣೆಕಟ್ಟಿನಿಂದ 1,012 ಕ್ಯೂಸೆಕ್‌ನಷ್ಟು ನೀರು ಬಿಡುಗಡೆ ಮಾಡಿದೆ. ಗುರುವಾರ ಮುಂಜಾನೆ 8 ರಿಂದ ಶುಕ್ರವಾರ ಮುಂಜಾನೆ 8ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ನಾಸಿಕ್‌ನಲ್ಲಿ 27.2 ಮಿ.ಮೀ., ಇಗತ್‌ಪುರಿಯಲ್ಲಿ 65ಮಿ.ಮೀ., ತ್ರೈಬಕೇಶ್ವರದಲ್ಲಿ 46 ಮಿ.ಮೀ., ದಿಂಡೋರಿಯಲ್ಲಿ 14 ಮಿ.ಮೀ., ಪೇಂಟ್‌ನಲ್ಲಿ 101 ಮಿ.ಮೀ., ನಿಫಾಡ್‌ 54.2 ಮಿ.ಮೀ., ಸಿನ್ನಾರ್‌ನಲ್ಲಿ 26.4 ಮಿ.ಮೀ., ಚಾಂದ್ವಾ ಡ್‌ನ‌ಲ್ಲಿ 54 ಮಿ.ಮೀ., ದೇವ್ಲಾದಲ್ಲಿ 43.4 ಮಿ.ಮೀ., ನಂದಗಾಂವ್‌ನಲ್ಲಿ 60 ಮಿ.ಮೀ., ಲೆಗಾಂವ್‌ನಲ್ಲಿ 64 ಮಿ.ಮೀ., ಯೇವ್ಲಾದಲ್ಲಿ 59 ಮಿ.ಮೀ.,ಬಾಗ್ಲಾಣ್‌ನಲ್ಲಿ 57 ಮಿ.ಮೀ., ಕಲ್ವಾಣ್‌ನಲ್ಲಿ 57 ಮಿ.ಮೀ. ಮತ್ತು ಸುರ್ಗಾ ನಾದಲ್ಲಿ 86 ಮಿ.ಮೀ. ಮಳೆ ದಾಖಲಾಗಿದೆ. ಪ್ರಸಕ್ತ ಮಾನ್ಸೂನ್‌ ಋತುವಿನಲ್ಲಿ ಜಿಲ್ಲೆಯು ಈವರೆಗೆ ಒಟ್ಟು 814.2 ಮಿ.ಮೀ. ಮಳೆ ದಾಖಲಾಗಿದೆ.

ಯವತ್ಮಾಳ್‌ ವರದಿ
ಮಹಾಮಳೆಯಿಂದ  ಯವತ್ಮಾಳ್‌ ಜಿಲ್ಲೆಯ ಗ್ರಾಮಗಳ ನದಿ, ನಾಲೆಗಳು ಉಕ್ಕಿ ಹರಿಯುತ್ತಿದ್ದು, ಅಪಾಯಕಾರಿ ಸ್ಥಿತಿಗೆ ತಲುಪಿವೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಗ್ರಾಮಗಳ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಇನ್ನು ಉಳಿದ ಗ್ರಾಮಗಳ ಜನರಿಗೆ  ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಗಿದೆ. ಯವತ್ಮಾಳ್‌ದ ಅರುಣಾವತಿ, ಪೈನ್‌ಗಂಗಾ, ಅಡಾಣಿ ನದಿಗಳು ತುಂಬಿ ಹರಿಯುತ್ತಿವೆ. ಪೈನ್‌ಗಂಗಾ ನದಿಯು ಅಪಾಯಕಾರಿ ಸ್ಥಿತಿ ಉಂಟಾಗಿದ್ದು, ಕವಠಾ ಬಜಾರ್‌, ಸಾಕೂರ್‌, ರಾಣಿಧಾನೋರಾ ಗ್ರಾಮಗಳು ಜಲಾವೃತ ಗೊಂಡಿವೆ.

ಭಾರೀ ಮಳೆಯಿಂದ ನಗರದ ನಾಲೆಗಳು ತುಂಬಿ ಹರಿಯುತ್ತಿದ್ದು,  ಮೋಮಿನ್‌ಪುರ, ಆಮದಾನಿ, ದುರ್ಗಮಂದಿರ, ಶಾಸ್ತ್ರಿನಗರಗಳಂತ ಪ್ರದೇಶಗಳಲ್ಲಿಯ ಜೋಪಡಿಗಳಿಗೆ  ನೀರು ನುಸುಳಿದ್ದು, ಜನರ‌ನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ನೆರೆ ಪೀಡಿತ ಜನರ ರಕ್ಷಣೆ  
ಕಾರ್ಯದಲ್ಲಿ ನಗರಾಧ್ಯಕ್ಷೆ ಅರ್ಚನಾ ಅಮೋಲ್‌ ಮಂಗಾಮ್‌, ಮುಖ್ಯ ಅಧಿಕಾರಿ ಕರಣ್‌ಕುಮಾರ್‌, ತಹಶೀಲ್ದಾರ್‌ ಸಂಜಯ್‌ ಭಸ್ಕೆ ಸೇರಿದಂತೆ ಅಧಿಕಾರಿಗಳು ಮತ್ತು ಕಾರ್ಯದರ್ಶಿ ಗಳು  ತೊಡಗಿದ್ದಾರೆ.  ದಾಭಾಡಿಯಲ್ಲಿ ನಾಲೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದ ಕಾರಣ ಸುಮಾರು 13 ಮನೆಗಳು ಜಲಾವೃತಗೊಂಡಿದೆ. ಕೊಸ್‌ದಾನಿ ಗ್ರಾಮ ಜಲಾವೃತ ಗೊಂಡಿದ್ದು, ತುಲಜಾಪುರಕ್ಕೆ  ಹೋಗುವ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. 

ಆರು ಮಂದಿ ನಾಪತ್ತೆ
ನಂದೂರ್‌ಬಾರ್‌: ಕಳೆದ ಒಂದು ರಾತ್ರಿಯಲ್ಲಿ ಸುರಿದ ಮಳೆಯಿಂದ ಮೂವರು ಸಾವನ್ನಪ್ಪಿದ್ದು, ಆರು ಮಂದಿ ನಾಪತ್ತೆಯಾದ ಪ್ರಕರಣದ ನವಾಪುರ ತಾಲೂಕಿನಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ. ಧಾರಾಕಾರವಾಗಿ ಸುರಿಯುತ್ತಿದ್ದ  ಮಳೆಯಿಂದ  ತಾಲೂಕಿನ ಸರ್ಪಣಿ ಮತ್ತು ರಂಗಾವಲಿ ನದಿಗಳು ಉಕ್ಕಿ ಹರಿದ ಪರಿಣಾಮ ನವಾಪುರ ನಗರವು ಜಲಾವೃತಗೊಂಡಿದೆ. ಅನೇಕ ಮನೆಗಳಿಗೆ ನೀರು ನುಗ್ಗಿದೆ. ವಾಡಿ- ಶೇವಾಡಿ ನಡುವೆಯ ಸೇತುವೆ ಮುರಿದ ಕಾರಣ ಸರ್ಪಣಿ ನದಿಯ ಪ್ರವಾಹಕ್ಕೆ ಜಮ್ನಾ ಬಾಯಿ  ಎನ್ನುವ ಮಹಿಳೆ ಸಾವನ್ನಪ್ಪಿದ್ದಾರೆ. ಅದೇ ಖೋಕ್ಸಾ ಗ್ರಾಮದಲ್ಲಿ  
ಭಾರೀ ಮಳೆಸುರಿದ ಕಾರಣ ಮನೆ ಕುಸಿದು  ಮಹಿಳೆಯೋರ್ವಳು ಸಾವನ್ನಪ್ಪಿದ್ದಾರೆ. ಆಂಚ್‌ಪಾಡಾ ಪರಿಸರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಲಿಕೊಂಡು ಬಂದಿರುವುದು ಪತ್ತೆಯಾಗಿದೆ. ಮೀನಾಬಾಯಿ ಕಾಸಾರ, ವಾಘಳ್‌ಪಾಡಾ, ನವಾಪುರಗಳಲ್ಲಿ ಭಾರೀ ಮಳೆಯಿಂದ ಆರು ಮಂದಿ ನಾಪತ್ತೆ ಯಾಗಿದ್ದಾರೆ.

Advertisement

ನಗರ ಸಂಪರ್ಕ ಕಡಿತ
ಯವತ್ಮಾಳ್‌ ಜಿಲ್ಲೆಯ  ಕವಠಾ ಬಜಾರ್‌, ಸಾಕೂರ್‌,ಆಮ್ನಿ ಆಸ್ರಾ, ಮಹಾಲೂಂಗಿ, ದಾಭಾಡಿ, ಕೋರ್ಪಾ, ಪರಸೋಡಾ, ಸಾವಿ, ರಾಣಿಧಾನೋರಾ, ಅಂಜನ್‌ಖೇಡ್‌ ಗ್ರಾಮಗಳು ಜಲಾವೃತಗೊಂಡಿದ್ದು,  ನಗರದ ಸಂಪರ್ಕ ಕಳೆದುಕೊಂಡಿವೆ.

ಧಾರಾಕಾರ ಮಳೆ
ಶುಕ್ರವಾರ ಇಲ್ಲಿನ ಜಿಲ್ಲಾಡಳಿತದ ವತಿಯಿಂದ ನೀಡಲಾಗಿರುವ ಮಾಹಿತಿಯ ಪ್ರಕಾರ, ಇಗತ್‌ಪುರಿ, ತ್ರೈಬಕೇಶ್ವರ, ಸಿನ್ನಾರ್‌, ದಿಂಡೋರಿ ಮತ್ತಿತರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next