Advertisement

ಗ್ರಾಮಾಂತರ ಪ್ರದೇಶದಲ್ಲಿ ಮುಂದುವರಿದ ಮಳೆ, ವಿವಿಧೆಡೆ ಹಾನಿ

10:14 PM Oct 18, 2019 | mahesh |

ಮಹಾನಗರ: ಎರಡು ದಿನ ಗಳಿಂದ ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಮಳೆ ಬಿರುಸುಗೊಂಡಿದೆ. ನಗರದಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ಸುಮಾರು 11 ಗಂಟೆಯಿಂದ 2 ಗಂಟೆಯವರೆಗೆ ಸುರಿದ ಭಾರೀ ಮಳೆಗೆ ಕೆಲವು ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಕೃತಕ ನೆರೆ ಆವರಿಸಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಿದರು.

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಹೊರಗಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸರಾಗವಾಗಿ ನೀರು ಹರಿಯದೆ ರೈಲು ನಿಲ್ದಾಣ ಹೊರಗಡೆ, ಫ್ಲಾಟ್‌ಫಾರಂ ಒಳಗಡೆ ನೀರು ನುಗ್ಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿದ ಪರಿಣಾಮ, ಪ್ರಯಾಣಿಕರು, ವಾಹನ ಸವಾರರು ಸಂಕಷ್ಟಕ್ಕೊಳಗಾರದರು. ರೈಲು ನಿಲ್ದಾಣದ ಒಳಗೆ ನೀರು ಸೋರುತ್ತಿರುವ ದೃಶ್ಯವೂ ಕಂಡು ಬಂದಿತ್ತು.

ಮನೆಗೆ ನೀರು ನುಗ್ಗಿ ಅವಾಂತರ
ಬೋಳಾರ ಬಳಿ ರಮೇಶ ಅವರ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಹೊಗೆ ಬಜಾರ್‌ ಸರಕಾರಿ ಶಾಲೆ ಬಳಿ ಕೃತಕ ನೆರೆ ಆವರಿಸಿ ಕೆಲವು ಮನೆಗಳ ಒಳಗೆ ನೀರು ನುಗ್ಗಿತ್ತು.

ಸುಗಮ ಸಂಚಾರಕ್ಕೆ ತೊಂದರೆ
ಭಾರೀ ಮಳೆಯಿಂದಾಗಿ ನಗರದ ಬಲ್ಮಠ, ಪಿವಿಎಸ್‌, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌, ಪಂಪ್‌ವೆಲ್‌, ನಂತೂರು ಮತ್ತಿತರ ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ನಗರದ ಕೆಲವು ಕಡೆಗಳಲ್ಲಿ ಒಳಚರಂಡಿ, ಫುಟ್‌ಪಾತ್‌ ಕೆಲಸಗಳು ನಡೆಯುತ್ತಿದೆ. ಕೆಲವೆಡೆ ಕಾಂಕ್ರೀಟ್‌ ರಸ್ತೆ ಮಧ್ಯದಲ್ಲಿ ಅಗೆದು ಹಾಕಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಉಳ್ಳಾಲ: ಗುಡುಗು ಸಹಿತ ಮಳೆ, ವಿವಿಧೆಡೆ ಹಾನಿ
ಉಳ್ಳಾಲ: ಕಳೆದೆರಡು ದಿನಗಳಿಂದ ಉಳ್ಳಾಲ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ತೊಕ್ಕೊಟ್ಟು ಚೆಂಬುಗುಡ್ಡೆ, ಪಾವೂರು ನಾಗಮೂಲೆಮತ್ತು ಪಂಡಿತ್‌ ಹೌಸ್‌ ಬಳಿ ಮೂರು ಮನೆಗಳಿಗೆ ಹಾನಿಯಾದರೆ, ಕೊಣಾಜೆಯಲ್ಲಿ ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾಗಿದೆ.

Advertisement

ಕೇಶವ ಎಂಬುವವರ ಮನೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಕೇಶವ ಅವರು ತಮ್ಮ ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲಿದ್ದರು. ರಾತ್ರಿ ಒಂಬತ್ತರ ವೇಳೆಗೆ ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿದ್ದು, ಈ ಸಂದರ್ಭದಲ್ಲಿ ಮನೆ ಮಂದಿ ಹೊರಗೆ ಓಡಿ ಬಂದು ಜೀವ ರಕ್ಷಿಸಿಕೊಂಡಿದ್ದಾರೆ. ಮನೆಯು ಕುಸಿದು ಬಿದ್ದಿರುವುದರಿಂದ ಮನೆಯೊಳಗಿದ್ದ ವಸ್ತುಗಳು ಹಾನಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ತೀರಾ ಬಡತನದ ಕುಟುಂಬವು ಈಗ ಮನೆಯು ಕುಸಿದು ಬಿದ್ದಿರುವುದರಿಂದ ದಿಕ್ಕು ತೋಚದಂತಾಗಿದ್ದಾರೆ. ಘಟನೆಯಿಂದ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಡಿಲಿಗೆ ಮನೆ ಕುಸಿತ
ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬು ಗುಡ್ಡೆ ಬಳಿ ಸಿಡಿಲಾಘಾತಕ್ಕೆ ಮನೆ ಕುಸಿದು ಮಹಮ್ಮದ್‌ ಅಬೂಬಕರ್‌ ಸಿದ್ದೀಖ್‌, ಹಂಝ ಸಹೋದರರು ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಕುಟುಂಬದ ಏಳು ಮಂದಿ ಮನೆಯೊಳಗೇ ಇದ್ದರೂ, ಪವಾಡಸದೃಶವಾಗಿ ಪಾರಾಗಿದ್ದಾರೆ. ಕೊಣಾಜೆಯ ಪರಂಡೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿಯಾದರೆ, ಕುತ್ತಾರು ಪಂಡಿತ್‌ಹೌಸ್‌ ಬಳಿ ವಸತಿ ಸಂಕೀರ್ಣದ ಕಂಪೌಂಡ್‌ ಗೋಡೆ ಕುಸಿದು ಬಿದ್ದು ಮನೆಗೆ ಹಾನಿಯಾಗಿದೆ.

ಶಾಸಕ ಯು.ಟಿ. ಖಾದರ್‌ ಭೇಟಿ
ಸಿಡಿಲಿಗೆ ಹಾನಿಗೀಡಾದ ಮನೆಗೆ ಶಾಸಕ ಯು.ಟಿ. ಖಾದರ್‌ ಭೇಟಿ ನೀಡಿದ್ದು ಈ ಬಾರಿಯ ಮಳೆಯಲ್ಲಿ ವಿವಿಧೆಡೆ ನಡೆದ ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಮನೆಗಳಿಗೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸುವ ಭರವಸೆ ನೀಡಿದರು.

ಮೂಲ್ಕಿ: ಸಾಧಾರಣ ಮಳೆ
ಮೂಲ್ಕಿ: ಶುಕ್ರವಾರ ಮಧ್ಯಾಹ್ನವಾಗುತ್ತಲೇ ಮೂಲ್ಕಿ ಪರಿಸರದ ಹಲವೆಡೆ ಮಳೆಯಾಗಿದೆಯಲ್ಲದೆ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಆದರೆ ಮಳೆಯ ಜತೆಗೆ ನಿತ್ಯವೂ ಇದ್ದ ಮಿಂಚು ಮತ್ತು ಸಿಡಿಲಿನ ಅಬ್ಬರ ಕಡಿಮೆಯಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ಯಾವುದೇ ವರದಿಯಾಗಿಲ್ಲ.

ಕಂದಾಯ ಇಲಾಖೆ ಮತ್ತು ನಗರ ಪಂಚಾಯತ್‌ ಮೂಲಕ ಮಳೆಯಿಂದ ಆಗಬಹುದಾದ ತೊಂದರೆ ಮತ್ತು ಪರಿಹಾರ ಕೆಲಸಗಳಿಗಾಗಿ ವಿಪತ್ತು ನಿರ್ವಹಣಾ ಘಟಕ ಸನ್ನದ್ಧವಾಗಿದ್ದು ಸಾರ್ವಜನಿಕರು ನಗರ ಪಂಚಾಯತ್‌ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಗುರುವಾರದ ಮಳೆ ಮತ್ತು ಸಿಡಿಲು ಮಿಂಚಿನ ಅಬ್ಬರಕ್ಕೆ ಕಾರ್ನಾಡು ಕೊಕ್ಕರ್‌ಕಲ್‌ ಬಳಿಯ ಲಕ್ಷ್ಮಣ್‌ ದೇವಾಡಿಗ ಎಂಬವರ ಮನೆಯ ಶೌಚಾಲಯದ ಗೋಡೆಯು ಕುಸಿದು ಸುಮಾರು 40 ಸಾವಿರ ರೂ. ಮೊತ್ತದ ನಷ್ಟ ಉಂಟಾಗಿದೆಯಲ್ಲದೆ ಮನೆಯ ಇತರ ಗೋಡೆಗಳಲ್ಲೂ ಬಿರುಕು ಕಾಣಿಸಿಕೊಂಡಿದೆ.

ಹಳೆಯಂಗಡಿ : ಸಾಧಾರಣ ಮಳೆ
ಹಳೆಯಂಗಡಿ: ಇಲ್ಲಿನ ಹಳೆಯಂಗಡಿ- ಪಡುಪಣಂಬೂರು ವ್ಯಾಪ್ತಿಯಲ್ಲಿ ಅ. 18ರಂದು ಸಾಧಾರಣ ಮಳೆಯಾಗಿದೆ. ಬೆಳಗ್ಗೆಯಿಂದ ಆರಂಭಗೊಂಡ ಮಳೆಯು ಮಧ್ಯಾಹ್ನದವರೆಗೆ ಸುರಿದಿತ್ತು. ಸಸಿಹಿತ್ಲು ಪ್ರದೇಶದಲ್ಲಿ ಸಮುದ್ರ ತೀರವು ಸಹ ಶಾಂತವಾಗಿದ್ದು, ಸುತ್ತಮುತ್ತ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆರೆಂಜ್‌ ಅಲರ್ಟ್‌; ಇಂದೂ ಮಳೆ ಸಾಧ್ಯತೆ
ಅರಬಿ ಸಮುದ್ರದಲ್ಲಿ ಲಕ್ಷದ್ವೀಪದ ಆಸುಪಾಸು ನಿಮ್ನ ಒತ್ತಡ ಸೃಷ್ಟಿಯಾಗಿದ್ದು, ಪರಿಣಾಮದಿಂದ ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ಕಾರಣಕ್ಕೆ ಶನಿವಾರ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ವೇಳೆ 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಇದರಿಂದಾಗಿ ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next