Advertisement

ಮುಂದುವರಿದ ಜಿಟಿ ಜಿಟಿ ಮಳೆ: ಟ್ರಾಫಿಕ್‌ ಜಾಮ್‌, ಸಂಚಾರ ಸಂಕಷ್ಟ

12:04 AM Jul 20, 2019 | mahesh |

ಮಹಾನಗರ: ನಗರದಲ್ಲಿ ಬುಧವಾರ ರಾತ್ರಿಯಿಂದ ಆರಂಭಗೊಂಡಿದ್ದ ಭಾರೀ ಮಳೆ ಶುಕ್ರವಾರವೂ ಮುಂದು ವರಿಯಿತು. ಗುರುವಾರ ಮಧ್ಯಾಹ್ನ ಬಳಿಕ ಮಳೆ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾದರೂ ಶುಕ್ರವಾರ ಬೆಳಗ್ಗಿನಿಂದಲೇ ಮಳೆ ಆರಂಭಗೊಂಡಿತ್ತು.

Advertisement

ಶುಕ್ರವಾರ ಬೆಳಗ್ಗಿನಿಂದಲೇ ಜಿಟಿ ಜಿಟಿ ಮಳೆ ಆರಂಭಗೊಂಡು ಮಧ್ಯಾಹ್ನ 11 ಗಂಟೆಯ ಬಳಿಕ ಮಳೆ ಬಿರುಸುಗೊಂಡಿತ್ತು. ಇದರಿಂದಾಗಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಯಿತು.

ಸುರಿದ ಭಾರೀ ಮಳೆಗೆ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತ್ತು. ಇದರಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಯಿತು.

ಟ್ರಾಫಿಕ್‌ ಜಾಮ್‌
ನಗರದ ಜ್ಯೋತಿ ವೃತ್ತ, ಹಂಪನಕಟ್ಟೆ, ಸ್ಟೇಟ್ಬ್ಯಾಂಕ್‌, ಕದ್ರಿ, ನಂತೂರು, ಪಿವಿಎಸ್‌, ಬಂಟ್ಸ್‌ ಹಾಸ್ಟೆಲ್, ಕಂಕ ನಾಡಿ, ಪಂಪ್‌ವೆಲ್, ಬಿಜೈ ಸಹಿತ ವಿವಿಧ ಭಾಗಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಸುರತ್ಕಲ್: ಧಾರಾಕಾರ ಮಳೆ
ಸುರತ್ಕಲ್: ಶುಕ್ರವಾರ ಬೆಳಗಿನಿಂದಲೇ ಸುರತ್ಕಲ್, ಪಣಂಬೂರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಗಾಳಿ ಸಹಿತ ಮಳೆಯಾದರೂ ಯಾವುದೇ ಹಾನಿ ಸಂಭವಿಸಿಲ್ಲ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಇದೇ ಕಾರಣಕ್ಕೆ ಶನಿವಾರದಂದು ದ.ಕ. ಜಿಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಸೇರಿ ಎಲ್ಲ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ರಜೆ ಘೋಷಿಸಲಾಗಿದೆ. ಈಗಾಗಲೇ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂಗಳನ್ನು ಸಕ್ರಿಯಗೊಳಿಸಲಾಗಿದೆ.

ಭಾರೀ ಮಳೆ ಸುರಿದಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಹೆದ್ದಾರಿಯ ಕೂಳೂರು, ಪಣಂಬೂರು ಸಹಿತ ಹೆದ್ದಾರಿಯಲ್ಲಿ ಹೊಂಡ ಬಿದ್ದು ವಿವಿಧೆಡೆ ನೀರು ನಿಂತಿದ್ದು, ಜಾಗರೂಕತೆಯಿಂದ ವಾಹನವನ್ನು ಚಾಲಕರು ಓಡಿಸುತ್ತಿರುವುದು ಕಂಡು ಬಂತು. ಶನಿವಾರ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಉಳಿದಂತೆ ತಗ್ಗು ಪ್ರದೇಶಗಳಲ್ಲಿ ಇರುವ ಮನೆ ಮಂದಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಕಟೀಲು: ಮಳೆಗೆ ಉಕ್ಕಿ ಹರಿದ ನಂದಿನಿ ನದಿ
ಕಟೀಲು:
ಶುಕ್ರವಾರ ಸುರಿದ ಮಳೆಗೆ ನಂದಿನಿ ನದಿಯೂ ಉಕ್ಕಿಹರಿಯುತ್ತಿದೆ. ಈ ಬಾರಿ ಮಳೆಗಾಲ ಆರಂಭವಾಗಿ 45 ದಿನಗಳು ಕಳೆದರೂ ಇಂದು ಸುರಿದ ನಿರಂತರ ಮಳೆಗೆ ಮೊದಲ ನೆರೆಯಾಗಿದೆ. ನಂದಿನಿ ನದಿಯ ನೆರೆಗೆ ಕಟೀಲು ದೇವಸ್ಥಾನದ ಅಣೆಕಟ್ಟು ಮುಳುಗಿದೆ. ಈಗಾಗಲೇ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ. ಇಂದು ರಾತ್ರಿ ಮಳೆ ಸುರಿದರೆ ಕಟೀಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಿಲೆಂಜೂರು ಬೈಲು, ಅತ್ತೂರು ಬೈಲು ಮಹಾಗಣಪತಿ ಮಂದಿರ ರಸ್ತೆಯ ಮುಳುಗಡಯಾಗಲಿದೆ. ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಪಂಜ, ಉಲ್ಯ ಪರಿಸರದಲ್ಲಿಯು ನೆರೆ ಸಾಧ್ಯತೆ ಇದೆ ಎಂದು ಅಲ್ಲಿನ ಕೃಷಿಕ ಸತೀಶ್‌ ಶೆಟ್ಟಿ ಪಂಜ ಬೈಲಗುತ್ತು ತಿಳಿಸಿದ್ದಾರೆ.

ಮೂರು ದಿನ ರೆಡ್‌ ಅಲರ್ಟ್‌
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಇದೇ ಕಾರಣಕ್ಕೆ ಶನಿವಾರದಂದು ದ.ಕ. ಜಿಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಸೇರಿ ಎಲ್ಲ ಶಾಲಾ ಕಾಲೇಜುಗಳಿಗೆ (ಪದವಿ ಪೂರ್ವ ತರಗತಿವರೆಗೆ) ರಜೆ ಘೋಷಿಸಲಾಗಿದೆ. ಈಗಾಗಲೇ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂಗಳನ್ನು ಸಕ್ರಿಯಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next