ಕೋಲಾರ: ತಾಲೂಕಿನ ವೇಮಗಲ್, ಕ್ಯಾಲನೂರು ಸುತ್ತಮುತ್ತ ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚು ಎನ್ನಲಾದ ಭಾರೀ ಮಳೆ ಸುರಿದಿದ್ದು, ಮನೆ ಅಂಗಡಿಗಳಿಗೆ ನೀರು ನುಗ್ಗಿದ್ದು, ರೈತರ ಅಪಾರ ಬೆಳೆಗಳು ಹಾನಿಗೊಳಗಾಗಿವೆ.
ಶನಿವಾರ ಮಧ್ಯಾಹ್ನ 2.30ಕ್ಕೆ ಆರಂಭ ಗೊಂಡ ಮಳೆ ಸತತ ಮೂರು ಗಂಟೆ ಸುರಿದಿದ್ದು, ಮಳೆಯ ಜತೆಗೆ ಬಿರುಗಾಳಿ, ಆಲಿಕಲ್ಲು ಬಿದ್ದಿದ್ದರಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಬಿರುಗಾಳಿ, ಆಲಿಕಲ್ಲು ಮಳೆಯಿಂದಾಗಿ ಹಲವು ಕಡೆ ಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ರುವುದರಿಂದಾಗಿ ಸುತ್ತಮುತ್ತಲ ಗ್ರಾಮ ಗಳಲ್ಲಿಯೂ ವಿದ್ಯುತ್ ಕಡಿತಗೊಂಡಿದೆ. ಕೆಲವು ಕಡೆಗಳಲ್ಲಿ ಮರಗಳು ರಸ್ತೆಯಲ್ಲಿ ಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಯಾಯಿತು.
ಬೆಳೆ ನಷ್ಟ: ರೈತರು ಬೆಳೆದ ಲಕ್ಷಾಂತರ ರೂ. ಟೊಮೆಟೋ, ಬೀನ್ಸ್, ಕ್ಯಾರೆಟ್, ಸೌತೇಕಾಯಿ, ಪಪ್ಪಾಯಿ, ಹೂ, ಸೊಪ್ಪು ಮತ್ತಿತರ ಬೆಳೆಗಳಿಗೆ ಹಾನಿಯಾಗಿದ್ದು, ಆಲಿಕಲ್ಲು ಸಹಿತ ಭಾರೀ ಮಳೆಗೆ ಜನತೆ ತತ್ತರಿಸಿಹೋದರು. ಕ್ಯಾಲನೂರು ಗ್ರಾಮ ದಲ್ಲಿ ಗ್ರಾಪಂ ಸಿಬ್ಬಂದಿ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಚರಂಡಿಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ಮನೆಗಳಿಗೆ ನುಗ್ಗಿದ್ದರಿಂದ ಜನತೆ ಸಂಕಷ್ಟ ಅನುಭವಿಸುವಂತಾಯಿತು.
ಕೆಲವು ಕಡೆಗಳಲ್ಲಿ ನೀರು ಸರಾಗವಾಗಿ ಸಾಗಲು ಕಾಲುವೆಗಳನ್ನು ಮಾಡದ ಕಾರಣ ರಸ್ತೆಗಳು ಕೆರೆಗಳಂತಾಗಿದ್ದು, ಮೋಟಾರ್ ಪಂಪ್ ಅಳವಡಿಸಿ ನೀರನ್ನು ಹೊರಹಾಕುವ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ನಿರತವಾಗಿದೆ.
ಸದಸ್ಯರ ವಿರುದ್ಧ ಕಿಡಿ: ಕ್ಯಾಲನೂರು ಗ್ರಾಮದಲ್ಲಿ ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಎಂದೇ ಹೇಳಲಾಗಿದ್ದು, ಚರಂಡಿ, ನೀರಿನ ಕಾಲುವೆ ಒತ್ತುವರಿ ತೆರವುಗೊಳಿಸುವಲ್ಲಿ ಗ್ರಾ.ಪಂ ನಿರ್ಲಕ್ಷ್ಯ ವಹಿಸಿದ್ದೇ ಇಂದಿನ ಸಂಕಷ್ಟಕ್ಕೆ ಕಾರಣ ಎಂದು ಗ್ರಾಮಸ್ಥರು ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಕಂಬಗಳನ್ನು ಸರಿಪಡಿಸಿ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸ ಬೇಕು, ಬೆಳೆಗಳ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು, ಗ್ರಾಮದಲ್ಲಿ ಒತ್ತುವರಿ ಯಾಗಿರುವ ಕಾಲುವೆ ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು ಎಂದು ಜನತೆ ಆಗ್ರಹಿಸಿದರು.