Advertisement

ಕೊರಟಗೆರೆಯಲ್ಲಿ ಮಳೆ ಆರ್ಭಟ :25 ವರ್ಷಗಳ ಬಳಿಕ ಕೋಡಿ ಬಿದ್ದ ಮಾವತ್ತೂರು ಕೆರೆ

08:39 PM Aug 03, 2022 | Team Udayavani |

ಕೊರಟಗೆರೆ: ಮಳೆರಾಯನ ಆರ್ಭಟದಿಂದ ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಪಾತ್ರದ ಸೇತುವೆಗಳು ಜಲಾವೃತವಾಗಿದ್ದು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಮಣ್ಣಿನ ಮನೆಗಳು ಕುಸಿದಿವೆ. ರೈತಾಪಿವರ್ಗ ಬಿತ್ತನೆ ಮಾಡಿದ್ದ ಸಾವಿರಾರು ಎಕರೆ ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ಕೋಟ್ಯಾಂತರ ರೂ ನಷ್ಟವಾಗಿದೆ.

Advertisement

ಕೊರಟಗೆರೆ ಕ್ಷೇತ್ರದ ಜಯಮಂಗಲಿ, ಸುವರ್ಣಮುಖಿ ಮತ್ತು ಗರುಡಾಚಲ ನದಿಗಳು 25 ವರ್ಷಗಳ ನಂತರ ಮತ್ತೆ ಸಂಗಮವಾಗಿವೆ. ವೀರಸಾಗರ ಮತ್ತು ಚೀಲಗಾನಹಳ್ಳಿ ಗ್ರಾಮವೇ ಜಲಾವೃತವಾಗಿ ಮನೆಯಲ್ಲಿದ್ದ ದವಸಧಾನ್ಯಗಳು ನೀರಿನಲ್ಲಿ ಮುಳುಗಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಗ್ನಿಶಾಮಕ ಸಿಬಂದಿ ಮತ್ತು ಪೊಲೀಸ್ ಇಲಾಖೆಯ ಸಹಾಯದಿಂದ ತೋಟದಲ್ಲಿನ ರೈತರನ್ನು ರಕ್ಷಣೆ ಮಾಡಲಾಗಿದೆ.

ಕೊರಟಗೆರೆ ಕ್ಷೇತ್ರದಲ್ಲಿ ರೈತರು ಬಿತ್ತನೆ ಮಾಡಿದ್ದ ಕೃಷಿ ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ನೂರಾರು ಮನೆಗಳು ನೆಲಸಮ ಆಗಿವೆ. ಮನೆಯಲ್ಲಿದ್ದ ಧಾನ್ಯಗಳು ನಾಶವಾಗಿವೆ. ಹೂವಿನ ಬೆಳೆಗಳು ನೀರಿನಲ್ಲಿ ಮುಳುಗಿವೆ. ತೋಟಗಳಲ್ಲಿ ೫ಅಡಿಗೂ ಅಧಿಕ ನೀರು ನಿಂತಿದೆ. ಮಳೆರಾಯನ ಆರ್ಭಟದಿಂದ ಕೊರಟಗೆರೆ ಕ್ಷೇತ್ರದಲ್ಲಿ ಊಹಿಸಲು ಆಗದಷ್ಟು ನಷ್ಟವಾಗಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿವರ್ಗ ಜಂಟಿ ಸಮೀಕ್ಷೆ ಮಾಡಬೇಕಿದೆ.

ತ್ರಿಮೂರ್ತಿ ಸಂಗಮ..
ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಗಳು ಕೊರಟಗೆರೆ ಕ್ಷೇತ್ರದ ಮೂಲಕ ಹರಿಯುತ್ತವೆ. 3 ನದಿಗಳು ವೀರಸಾಗರ ಬಳಿ ಸಂಗಮವಾಗಿ ಜಯಮಂಗಲಿ ನದಿಯಾಗಿ ಹರಿದು ಆಂಧ್ರಪ್ರದೇಶದ ಪರಿಗಿ ಕೆರೆಗೆ ಸೇರಲಿದೆ. ಕೊರಟಗೆರೆ ಕ್ಷೇತ್ರದ ಮಾವತ್ತೂರು ಕೆರೆಯು 25ವರ್ಷದ ನಂತರ ಭರ್ತಿಯಾಗಿದೆ. ತೀತಾ ಜಲಾಶಯ, ಜೆಟ್ಟಿಅಗ್ರಹಾರ ಮತ್ತು ತುಂಬಾಡಿ ಜಲಾಶಯ ಸೇರಿದಂತೆ ಕೊರಟಗೆರೆಯ 125 ಕ್ಕೂ ಅಧಿಕ ಕೆರೆಕಟ್ಟೆಗಳು ತುಂಬಿ ಕೋಡಿಬಿದ್ದಿವೆ.

ನೀರಿನಲ್ಲೇ ರೈತರ ಬಳಿ ಬಂದ ತಹಶೀಲ್ದಾರ್
ನದಿಯಲ್ಲಿ ಹರಿಯುವ ನೀರನ್ನು ಲೆಕ್ಕಿಸದೇ ಸೇತುವೆಯನ್ನು ದಾಟಿ ಮುಂಜಾನೆಯೇ ರೈತರ ಮನೆ ಮತ್ತು ಜಮೀನುಗಳಿಗೆ ತಹಶೀಲ್ದಾರ್ ನಾಹೀದಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆ-ಕಟ್ಟೆಗಳ ಮೇಲೆ ನಿಗಾ ವಹಿಸುವಂತೆ ಸಣ್ಣ ನೀರಾವರಿ ಇಲಾಖೆ ಸೂಚಿಸಿದ್ದಾರೆ. ಕಂದಾಯ ಇಲಾಖೆ, ತಾಪಂ ಇಓ, ಪಪಂ ಮುಖ್ಯಾಧಿಕಾರಿ ಮತ್ತು ಪೊಲೀಸ್ ಇಲಾಖೆ 24 ಗಂಟೆಯು ಕಾರ್ಯನಿರ್ವಹಣೆ ಮಾಡಲಿದೆ. ಗ್ರಾಪಂ ಪಿಡಿಓ ಮತ್ತು ನಾಡಕಚೇರಿ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೊಡುವಂತೆ ತಹಶೀಲ್ದಾರ್ ಖಡಕ್ ಆದೇಶ ಮಾಡಿದ್ದಾರೆ.

Advertisement

ಸೇತುವೆ ಜಲಾವೃತ-ಸಂಪರ್ಕ ಕಡಿತ
ಸುವರ್ಣಮುಖಿ ಮತ್ತು ಜಯಮಂಗಳಿ ನದಿಪಾತ್ರದ ಬಿ.ಡಿ.ಪುರ ಸಂಪರ್ಕದ ಸೇತುವೆ, ದೊಡ್ಡಸಾಗ್ಗೆರೆ ಸಂಪರ್ಕದ ಸೇತುವೆ, ಕೋಡ್ಲಹಳ್ಳಿ ಸೇತುವೆ, ಚೀಲಗಾನಹಳ್ಳಿ ಸೇತುವೆ, ಚನ್ನಸಾಗರ ಸೇತುವೆ, ಚೀಲಗಾನಹಳ್ಳಿ ಸೇತುವೆ, ಲಂಕೇನಹಳ್ಳಿ ಸೇತುವೆ ಜಲಾವೃತವಾಗಿ ಸಾರಿಗೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ನೂರಾರು ಮನೆಗಳಿಗೆ ನೀರು ಹರಿದು ಲಕ್ಷಾಂತರ ರೂ ನಷ್ಟವಾಗಿದೆ.

ಮಳೆರಾಯನ ಕೃಪೆಯಿಂದ ಕೊರಟಗೆರೆ ಕ್ಷೇತ್ರದ ಕೆರೆಕಟ್ಟೆ ತುಂಬಿ ದಶಕಗಳ ನಂತರ ೩ನದಿಗಳ ಸಂಗಮವಾಗಿದೆ. ಕೊರಟಗೆರೆ ಪಟ್ಟಣ ಮತ್ತು ಗ್ರಾಮೀಣದಲ್ಲಿ ಮನೆಗಳು ಕುಸಿದು ಬೆಳೆಗಳಿಗೆ ಹಾನಿಯಾಗಿವೆ. ನದಿಪಾತ್ರದ ರೈತರು ಎಚ್ಚರಿಕೆಯಿಂದ ಇರಬೇಕಿದೆ. ಕೆರೆ-ಕಟ್ಟೆಗಳ ರಕ್ಷಣೆಗೆ ಅಧಿಕಾರಿವರ್ಗ ಮುಂದಾಗಿ ರಾಜ್ಯ ಸರಕಾರ ತಕ್ಷಣ ರೈತರಿಗೆ ತುರ್ತು ಪರಿಹಾರ ನೀಡಬೇಕಿದೆ.

ಪಿ.ಆರ್.ಸುಧಾಕರಲಾಲ್. ಮಾಜಿ ಶಾಸಕ. ಕೊರಟಗೆರೆ

ಕೊರಟಗೆರೆಯ ವೀರಸಾಗರ ಮತ್ತು ಚೀಲಗಾನಹಳ್ಳಿ ಗ್ರಾಮ ಜಲಾವೃತ ಆಗಿದೆ. ಅಧಿಕಾರಿವರ್ಗ ಜಂಟಿಯಾಗಿ ತುರ್ತು ಕಾರ್ಯಚರಣೆ ನಡೆಸುತ್ತೀದ್ದಾರೆ. ಅವಶ್ಯಕತೆ ಇರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ. ಸರಕಾರದ ಆದೇಶದಂತೆ ಜಂಟಿ ಸಮೀಕ್ಷೆ ನಡೆಸಿ ಬೆಳೆಪರಿಹಾರ ಮತ್ತು ಪುರ್ನವಸತಿಗೆ ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ.

ವೈ.ಎಸ್.ಪಾಟೀಲ್. ಜಿಲ್ಲಾಧಿಕಾರಿ. ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next