Advertisement
ದ.ಕ. ಜಿಲ್ಲಾದ್ಯಂತ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು. ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ ಬೆಳಗ್ಗಿನಿಂದಲೇ ಮಳೆ ಆರಂಭವಾಗಿದ್ದು, ದಿನವಿಡೀ ಮಳೆ ಬಂದಿದೆ. ಒಮ್ಮೆ ಧಾರಾಕಾರ ಹಾಗೂ ಕೆಲವೊಮ್ಮೆ ಜಿಟಿ ಜಿಟಿ ಮಳೆ ಸುರಿದಿದೆ. ಇದರಿಂದ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲೂ ಭಾರೀ ಮಳೆಯಾಗಿದೆ. ಸಂಪಾಜೆ ಭಾಗದಲ್ಲಿ ಸುರಿದ ಭಾರೀ ಮಳೆಗೆ ಗೂನಡ್ಕ ದರ್ಕಸ್ ರಸ್ತೆ ತಿರುಗುವಲ್ಲಿ ರಾಷ್ಟ್ರೀಯ ಹೆದ್ದಾರಿ ಮೋರಿ ಬ್ಲಾಕ್ ಆಗಿದೆ.
ಸಿಡಿಲು ಮಿಂಚಿನಿಂದ ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಅಳದಂಗಡಿ ನಾವರದಲ್ಲಿ ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದ್ದು, 1.15 ಲಕ್ಷ ರೂ.ಗೂ ಅಧಿಕ ಹಾನಿಯಾಗಿದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ.
Related Articles
Advertisement
ಮೂಡುಬಿದಿರೆ, ಕಿನ್ನಿಗೋಳಿ, ಕಟೀಲು, ಬಜಪೆ, ಮೂಲ್ಕಿ ಭಾಗಗಳಲ್ಲಿಯೂ ಸಂಜೆ ಧಾರಾಕಾರ ಮಳೆ ಸುರಿದಿದೆ. ಕಿನ್ನಿಗೋಳಿ ಪ್ರದೇಶದ ಕೆಲವು ಗದ್ದೆಗಳಲ್ಲಿ ನೀರು ತುಂಬಿದ್ದು, ನೆರೆಯ ಮಾದರಿಯಲ್ಲಿ ಒಂದರಿಂದ ಇನ್ನೊಂದು ಗದ್ದೆಗೆ ಹರಿದಿದೆ. ಒಣಗಲು ಹಾಕಿದ್ದ ಬತ್ತದ ಬೈಹುಲ್ಲು ನೀರಿನಲ್ಲಿ ನನೆದು ಹಾನಿಯಾಗಿದೆ.
ಕೃಷಿಗೆ ಹಾನಿ: ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಭತ್ತದ ಕೃಷಿಗೆ ಹಾನಿಯಾಗಿದೆ. ಕೆಲವು ಕಡೆ ಕಟಾವು ಮುಗಿದಿದ್ದು, ಇನ್ನೂ ಕೆಲವು ಕಡೆ ಕೊಯ್ಲಿಗೆ ಸಿದ್ಧವಾಗಿದೆ.
ಆದರೆ ಗದ್ದೆಗಳಲ್ಲಿ ನೀರು ನಿಂತು ಕಟಾವಿಗೆ ಸಿದ್ದವಾಗಿದ್ದ ಭತ್ತದ ಪೈರು ಹಾಳಾಗಿದೆ. ತರಕಾರಿ ಕೃಷಿಗೂ ಹಾನಿ ಉಂಟಾಗಿದೆ.ಜಿಲ್ಲಾದ್ಯಂತ ಅಡಿಕೆ ತೋಟಗಳಲ್ಲಿ ಅಡಿಕೆ ಹಣ್ಣಾಗಿದ್ದು, ಕೆಲವರು ಕೊಯ್ಲು ಮಾಡಿ ಒಣಗಲು ಹಾಕಿದ್ದರಿಂದ ಅದಕ್ಕೂ ಮಳೆ ನೀರಿನಿಂದ ಹಾನಿಯಾಗಿದೆ. ಈ ಹಣ್ಣಡಿಕೆ ಕೊಳೆತು ಹೋಗುವ ಭೀತಿ ಎದುರಾಗಿದೆ. ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ
ಉಡುಪಿ: ಜಿಲ್ಲೆಯಲ್ಲಿ ಹಲವೆಡೆ ಧಾರಾಕಾರ ಮಳೆಯಾಗಿದೆ. ಶನಿವಾರ ತಡರಾತ್ರಿ, ರವಿವಾರ ಹಗಲಿಡೀ ಮೋಡ ಕವಿದ ವಾತಾವರಣದೊಂದಿಗೆ ನಿರಂತರ ಮಳೆಯಾಗಿದೆ.
ಕುಂದಾಪುರ, ಬೈಂದೂರು, ಕೊಲ್ಲೂರು, ಸಿದ್ದಾಪುರ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನ ಅನಂತರ ಲಘು ಪ್ರಮಾಣದ ಮಳೆ ಸುರಿದಿದೆ. ಸಾಯಂಕಾಲ ಬಳಿಕ ಕೆಲಕಾಲ ನಿರಂತರ ಮಳೆಯಾಗಿದೆ. ಹೆಬ್ರಿ, ಬಜಗೋಳಿ, ನಕ್ರೆ, ಇರ್ವತ್ತೂರು, ಅಜೆಕಾರು, ಕಾರ್ಕಳದಲ್ಲಿ ಮಧ್ಯಾಹ್ನ ಬಳಿಕ ಧಾರಾಕಾರ ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ, ಕಾಪು, ಹಿರಿಯಡಕ, ಪಡುಬಿದ್ರಿ, ಬ್ರಹ್ಮಾವರ ಸುತ್ತಮುತ್ತ ದಿನಪೂರ್ತಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಿದೆ. ಬಿಟ್ಟುಬಿಟ್ಟು ಮಳೆಯ ಜತೆಗೆ ಕಳೆದ ಮೂರ್ನಾಲ್ಕು ದಿನಗಳಿಂದ ವಾತಾವರಣದಲ್ಲಿ ವಿಶೇಷ ಬದಲಾವಣೆ ಕಂಡುಬರುತ್ತಿದ್ದು, ಹೆಚ್ಚು ತೇವಾಂಶದಿಂದ ಕೂಡಿದೆ. ದಿನವಿಡೀ ಚಳಿಗಾಲದಂತೆ ಇಬ್ಬನಿ ಸುರಿಯುತ್ತಿದೆ. ಕಾಸರಗೋಡು: ಇಂದು ಶಾಲೆಗಳಿಗೆ ರಜೆ
ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ ಭಾರೀ ಮಳೆ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ರವಿವಾರ ಸಂಜೆಯಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ, ನದಿ ತಟಗಳು, ಗುಡ್ಡೆ ಜರಿಯಲು ಸಾಧ್ಯತೆಯಿರುವ ಮಲೆನಾಡು ಪ್ರದೇಶಗಳಲ್ಲಿ ಜನರು ಜಾಗೃತೆ ಪಾಲಿಸುವಂತೆ ಮುನ್ನೆಚ್ಚರಿಕೆ ನೀಡಿದೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಸೋಮವಾರ ಎಲ್ಲ ವಿದ್ಯಾಲಯಗಳಿಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ರಜೆ ಸಾರಿದ್ದಾರೆ. ರಜೆ ಕಾಲೇಜುಗಳಿಗೆ ಬಾಧಕವಲ್ಲ. ಮಳೆಯ ಹಿನ್ನೆಲೆಯಲ್ಲಿ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಜಿಲ್ಲಾ ಎಮರ್ಜೆನ್ಸಿ ಆಪರೇಶನ್ ಸೆಂಟರ್ 04994-257700, ಕಾಸರಗೋಡು-04994-230021, ಮಂಜೇಶ್ವರ 04994-8244044, ಹೊಸದುರ್ಗ – 04672204042, 0467 2206222, ವೆಳ್ಳರಿಕುಂಡು – 0467 2242320 ನಂಬರ್ ಅನ್ನು ಸಂಪರ್ಕಿಸಬಹುದು.