Advertisement

ಪುನರ್ವಸು ಮಳೆಗೆ ತತ್ತರಿಸಿದ ಕರಾವಳಿ : ಇಂದು, ನಾಳೆ ರೆಡ್‌ ಅಲರ್ಟ್‌

01:21 AM Jul 19, 2021 | Team Udayavani |

ಮಂಗಳೂರು/ಉಡುಪಿ: ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ರವಿವಾರವೂ ಮುಂದುವರಿದಿತ್ತು. ವಿವಿಧೆಡೆ ಮನೆ, ಕೃಷಿಗೆ ಹಾನಿಯಾಗಿದ್ದರೆ ವಿಟ್ಲದಲ್ಲಿ ತೋಡಿಗೆ ಕಾಲು ಜಾರಿ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ.

Advertisement

ವಿಟ್ಲ ಕಸಬಾ ಗ್ರಾಮದ ಬಳಂತಿಮುಗೇರು ಶಾಲೆ ಸಮೀಪದ ನಿವಾಸಿ ಅವಿವಾಹಿತ ವಸಂತ ನಾಯ್ಕ (40) ಮೃತರು. ಸ್ಥಳಕ್ಕೆ ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ ಭೇಟಿ ನೀಡಿದರು.

ಕರಾವಳಿಯ ವಿವಿಧೆಡ ರವಿವಾರವಿಡೀ ಬಿರುಸಿನಿಂದ ಕೂಡಿದ ಮಳೆಯಾಗಿದೆ. ಮಂಗಳೂರಿನಲ್ಲಿ ಗಾಳಿ ಮಳೆಗೆ ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿತ್ತು. ಜಪ್ಪಿನಮೊಗರು ಬಳಿ ಮನೆಯೊಂದಕ್ಕೆ ಹಾನಿ ಉಂಟಾಗಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದ ರೆಡಿಮಿಕ್ಸ್‌ ಸಂಸ್ಥೆಯ ಬಳಿ ಬೃಹತ್‌ ಗುಡ್ಡ ಜರಿದು ಕೆಳಗಿನ ಭಾಗದ ಇಂಟರ್‌ಲಾಕ್‌ ಫ್ಯಾಕ್ಟರಿಯ ಕೆಲವು ವಾಹನಗಳು ಮಣ್ಣಿನಡಿಗೆ ಸಿಲುಕಿದೆ.

ಬಂಟ್ವಾಳ ತಾಲೂಕಿನ ಹಲವೆಡೆ ಮನೆ, ತೋಟಗಳಿಗೆ ಹಾನಿಯಾಗಿದ್ದರೆ, ಕೆಲವೆಡೆ ಗುಡ್ಡ ಜರಿದಿದೆ. ಸಜಿಪಮೂಡ ಗ್ರಾಮದ ನಗ್ರಿ ಎಂಬಲ್ಲಿ ಗುಡ್ಡ ಕುಸಿತಗೊಂಡಿದೆ. ಬಿ.ಸಿ.ರೋಡ್‌ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳಗಿನವಗ್ಗ, ಆಲಂಪುರಿ ಕ್ರಾಸ್‌ ಬಳಿ ರಸ್ತೆ ಬದಿ ಗುಡ್ಡ ಜರಿದು ಸುಮಾರು 50ಕ್ಕೂ ಅಧಿಕ ಅಡಕೆ ಮರಗಳು ಧರಾಶಾಹಿಯಾಗಿವೆ. ಬಂಟ್ವಾಳ ಕಸಬಾ ಗ್ರಾಮದ ಮುಗªಲ್‌ ಗುಡ್ಡೆ ಎಂಬಲ್ಲಿ ಮನೆ ಕುಸಿದು ಪೂರ್ಣ ಹಾನಿ ಆಗಿದೆ.

ಗುಡ್ಡ ಕುಸಿದು ಅಡಿಕೆ ಮರಗಳಿಗೆ ಹಾನಿ
ವಿಟ್ಲ: ವಿಟ್ಲಪಟ್ನೂರು ಗ್ರಾಮದ ಕೊಡಂಗೆ ಸುನಿಲ್‌ ಪಾಯ್ಸ ಅವರ ಮನೆಯ ಸಮೀಪದ ಗುಡ್ಡ ಭಾರೀ ಮಳೆಗೆ ಕುಸಿದು ಬಿದ್ದು ಅಡಿಕೆ ಮರಗಳು ನೆಲಸಮವಾಗಿವೆ. 75ಕ್ಕಿಂತ ಅಧಿಕ ಅಡಿಕೆ ಗಿಡ, ಮರಗಳು, ಬಾಳೆ ಇನ್ನಿತರ ಕೃಷಿ ಮಣ್ಣುಪಾಲಾಗಿವೆ. ಸುಮಾರು 20 ಅಡಿ ಎತ್ತರದ ಗುಡ್ಡ ಕುಸಿದು ಬಿದ್ದಿದ್ದು, ಪಕ್ಕದಲ್ಲಿರುವ ಬಾಡಿಗೆ ಮನೆ ಬಳಿಗೆ ತಲುಪಿದೆ. ಆದರೆ ಇತರ ಹಾನಿ ಸಂಭವಿಸಿಲ್ಲ. ಗುಡ್ಡದಿಂದ 20 ಅಡಿ ದೂರದಲ್ಲಿ ಮನೆಯಿರುವ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ.

Advertisement

ಮತ್ತೆ ಮುಳುಗಿದ ಸ್ನಾನಘಟ್ಟ
ಸುಬ್ರಹ್ಮಣ್ಯ: ಭಾರೀ ಮಳೆಯಿಂದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರಾ ಸ್ನಾನಘಟ್ಟ ಹಾಗೂ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ನೀರಿನ ಹರಿವು ಹೆಚ್ಚಾದ ಕಾರಣ ಸ್ನಾನಘಟ್ಟ ಸಹಿತ ಭಕ್ತರ ಬಟ್ಟೆ ಬದಲಾಯಿಸುವ ಕೊಠಡಿ , ಶೌಚಾಲಯ ಸೇರಿದಂತೆ ದೇವರ ಕಟ್ಟೆ ಕೂಡ ಭಾಗಶಃ ಮುಳುಗಡೆಯಾಗಿದೆ. ರಕ್ಷಣಾ ಹಿನ್ನೆಲೆಯಲ್ಲಿ ಸ್ನಾನ ಘಟ್ಟದ ಬಳಿ ರಬ್ಬರ್‌ ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಲಾಗಿದೆ. ಗೃಹರಕ್ಷಕದಳದ ಸಿಬಂದಿಯನ್ನೂ ನಿಯೋಜಿಸಲಾಗಿದೆ.
ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಮಲ್ಲಾರ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಮರ ಬಿದ್ದು ಸಂಚಾರ ವ್ಯತ್ಯಯ ಉಂಟಾಯಿತು.

9 ಮನೆ ಭಾಗಶಃ ಹಾನಿ
ರವಿವಾರ ದ.ಕ.ಜಿಲ್ಲೆಯಲ್ಲಿ ಒಟ್ಟು 3 ಮನೆ ಪೂರ್ತಿ ಹಾಗೂ 9 ಮನೆ ಭಾಗಶಃ ಹಾನಿಗೀಡಾಗಿದೆ. ಮಂಗಳೂರಿನಲ್ಲಿ 1 ಪೂರ್ತಿ, 4 ಭಾಗಶಃ, ಬಂಟ್ವಾಳದಲ್ಲಿ ಒಂದು ಪೂರ್ತಿ, 3 ಭಾಗಶಃ, ಪುತ್ತೂರಿನಲ್ಲಿ 2 ಭಾಗಶಃ ಹಾಗೂ ಕಡಬದಲ್ಲಿ ಒಂದು ಪೂರ್ತಿ ಮನೆ ಹಾನಿಗೀಡಾಗಿದೆ. ಬಂಟ್ವಾಳ, ವಿಟ್ಲ, ಕನ್ಯಾನ, ಪುತ್ತೂರು, ಉಪ್ಪಿನಂಗಡಿ, ಕಡಬ, ಧರ್ಮಸ್ಥಳ, ಬೆಳ್ತಂಗಡಿ, ಮಡಂತ್ಯಾರು, ಪೂಂಜಾಲಕಟ್ಟೆ, ಗುರುವಾಯನಕೆರೆ, ಸುಬ್ರಹ್ಮಣ್ಯ, ಸುಳ್ಯ, ಪಂಜ, ಉಳ್ಳಾಲ, ಸುರತ್ಕಲ್‌, ಮೂಡುಬಿದಿರೆ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಯಾಗಿದೆ.

ಉಡುಪಿ: 8 ಮನೆ ಭಾಗಶಃ ಹಾನಿ
ಉಡುಪಿ: ಜಿಲ್ಲೆಯಲ್ಲಿ ರವಿವಾರ ಉತ್ತಮ ಮಳೆ ಸುರಿದಿದೆ. ಗಾಳಿ-ಮಳೆಯಿಂದ ಜಿಲ್ಲೆಯಲ್ಲಿ 8 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಶನಿವಾರ ತಡರಾತ್ರಿ, ರವಿವಾರ ಬೆಳಗ್ಗೆಯಿಂದ ಸಾಯಂಕಾಲವರೆಗೂ ನಿರಂತರ ಮಳೆ ಸುರಿದಿದೆ.
ಭಾರೀ ಮಳೆಯಿಂದಾಗಿ ಕಾಪು ತಾಲೂಕಿನ ವಿವಿಧೆಡೆ ನೆರೆಯ ಭೀತಿ ಉಂಟಾಗಿದ್ದು ಮಜೂರು ಗ್ರಾಮದ ಉಳಿಯಾರು – ಕರಂದಾಡಿಯಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. 7 ಮನೆಗಳ 15ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಬೈಂದೂರು, ಹೆಬ್ರಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕಡೆಕಾರು, ಆತ್ರಾಡಿ, ಉದ್ಯಾವರ, ಮೂಡುಬೆಟ್ಟು, ಕುರ್ಕಾಲು, ಪಾಂಗಾಳ, ಯಡ್ತರೆ, ಯರಂಜಾಲು ಭಾಗದಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಉಡುಪಿ ಮಠದಬೆಟ್ಟು, ಕಡೆಕಾರು, ಕಿದಿಯೂರು ತಗ್ಗು ಪ್ರದೇಶದಲ್ಲಿ, ಬೆಳಗ್ಗೆ ಅವಧಿಯಲ್ಲಿ ನೆರೆ ಆವರಿಸಿದ್ದು, ಸಾಯಂಕಾಲ ನೆರೆ ಇಳಿದಿದೆ.

ಕಮಲಶಿಲೆ ದೇಗುಲದ ಒಳಪ್ರಾಂಗಣಕ್ಕೆ ನೀರು
ಸಿದ್ದಾಪುರ: ನಿರಂತರವಾಗಿ ಸುರಿದ ಮಳೆಯಿಂದಾಗಿ ರವಿವಾರ ಕುಬಾj ನದಿ ಉಕ್ಕಿ ಹರಿದು, ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಪ್ರಾಂಗಣಕ್ಕೆ ಪ್ರವೇಶಿಸಿದೆ. ಗರ್ಭಗುಡಿಯ ಪ್ರವೇಶಕ್ಕೆ ಕೆಲವೇ ಅಡಿಗಳ ನೀರು ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next