ಸೇಡಂ: ತಡ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಕೆಲವು ಬಡಾವಣೆಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾದರೆ, ಪಟ್ಟಣದ ಪೊಲೀಸ್ ಠಾಣೆಗೂ ನೀರು ನುಗ್ಗಿ ಆವಾಂತರ ಸೃಷ್ಟಿಸಿತ್ತು.
ಪಟ್ಟಣದ ಪೊಲೀಸ್ ಠಾಣೆಗೆ ನೀರು ನುಗ್ಗಿದ್ದರಿಂದ ದಾಖಲೆ ಪತ್ರ, ಗಣಕಯಂತ್ರ ಸೇರಿದಂತೆ ಇನ್ನಿತರ ವಸ್ತುಗಳು ನೀರಿನಲ್ಲಿ ಮುಳುಗಂತೆ ಸಂರಕ್ಷಿಸಲು ಸಿಬ್ಬಂದಿ ರಾತ್ರಿಯಿಡಿ ಹರಸಾಹಸ ಪಟ್ಟರು. ಕೆಲವು ಮನೆ, ಗುಡಿಸಲುಗಳ ಜನರು ರಾತ್ರಿಯಿಡಿ ನೀರು ಹೊರ ಹಾಕುತ್ತಾ ಜಾಗರಣೆ ಮಾಡುವ ಪರಿಸ್ಥಿತಿ ಉಂಟಾಯಿತು.
ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಸತಿ ನಿಲಯಗಳ ಆವರಣದಲ್ಲಿ ನೀರು ನಿಂತು ಓಡಾಡಲು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಂತೆ ಛೋಟಿ ಗಿರಣಿ, ಗಂಜ ಪಕ್ಕದ ಬಸ್ತಿ ಕಾಲೋನಿ, ಇನ್ಫೊಸಿಸ್ ಕಾಲೋನಿ, ಜೂನಿಯರ್ ಕಾಲೇಜು ಆವರಣ, ಜನತಾ ಕಾಲೋನಿಯ ಸಂಪರ್ಕ ರಸ್ತೆ, ಸ್ವಾಮಿ ವಿವೇಕಾನಂದ ಶಾಲೆ ರಸ್ತೆ ಹಾಗೂ ಹಲವು ಬಡಾವಣೆಗಳಿಗೆ ತೆರಳಲು ಜನರು ಹರಸಾಹಸ ಪಡಬೇಕಾಯಿತು.
ಮಳೆ ವಿವರ: ಸೇಡಂ ಪಟ್ಟಣದಲ್ಲಿ 86ಮಿ.ಮೀ ಮಳೆಯಾಗಿದೆ. ತಾಲೂಕಿನ ಆಡಕಿಯಲ್ಲಿ 20ಮಿ.ಮೀ ಮಳೆಯಾದರೆ, ಮುಧೋಳ 06ಮಿ.ಮೀ, ಕೋಡ್ಲಾದಲ್ಲಿ 11.06ಮಿ.ಮೀ ಮಳೆಯಾಗಿದೆ. ಆದರೆ ಸೇಡಂ ಪಟ್ಟಣದಲ್ಲಿ ಈ ಹಿಂದೆ ಸುರಿದ 60ಮಿ.ಮೀ ಮಳೆಯ ದಾಖಲೆ ಮೀರಿ 80ಮಿಮೀ ಮಳೆಯಾಗಿದೆ.
ತಡರಾತ್ರಿ ಸುರಿದ ಮಳೆಯಿಂದ ಯಾವುದೇ ಹಾನಿಯಾಗಿರುವ ವರದಿ ಬಂದಿಲ್ಲ. ಕೆಲವು ಕಡೆಗಳಲ್ಲಿ ರಸ್ತೆ, ಕಾಲೇಜು ಆವರಣಗಳಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ಕಳೆದ ಎರಡ್ಮೂರು ದಿನಗಳಿಂದ ಬಿಸಿಲು ಬಂದಿದ್ದರಿಂದ ಮಳೆಯಿಂದ ಯಾವುದೇ ತೊಂದರೆ ಉಂಟಾಗಿಲ್ಲ. ಕೆಲವು ವಸತಿ ನಿಲಯಗಳಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದ್ದು, ಅಧಿ ಕಾರಿಗಳನ್ನು ಕರೆದು ಮಾಹಿತಿ ಪಡೆಯಲಾಗುವುದು. –
ಬಸವರಾಜ ಬೆಣ್ಣೆಶಿರೂರ, ತಹಶೀಲ್ದಾರ್, ಸೇಡಂ
ತಡರಾತ್ರಿ ಸುರಿದ ಮಳೆಗೆ ಪೊಲೀಸ್ ಠಾಣೆಯ ಎಲ್ಲ ಕೋಣೆಗಳಿಗೂ ನೀರು ನುಗ್ಗಿದೆ. ದಾಖಲೆಗಳು ಹಾಗೂ ಇನ್ನಿತರ ವಸ್ತುಗಳನ್ನು ರಕ್ಷಿಸಲು ನಮ್ಮ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಠಾಣೆ ಒಳಗೂ ಮತ್ತು ಆವರಣದಲ್ಲಿ ಮೊಳಕಾಲು ಮಟ್ಟಕ್ಕೆ ನೀರು ನಿಂತಿರುವುದರಿಂದ ವಾಹನಗಳು ನೀರಿನಲ್ಲಿಯೇ ಸಿಲುಕಿದ್ದವು. ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಈ ರೀತಿ ನೀರು ನುಗ್ಗುತ್ತಲೇ ಇದೆ. ಠಾಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದೆ.
–ಸೋಮಲಿಂಗ ವಡೆಯರ್, ಪಿಎಸ್ಐ, ಸೇಡಂ
-ಸುಧೀರ ಎಸ್.ಬಿರಾದಾರ