Advertisement

ಕಾಪು : ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲೇ ಮಲಗಿದ ಭತ್ತದ ಪೈರುಗಳು ; ಅಪಾರ ಬೆಳೆ ಹಾನಿ

02:17 PM Oct 18, 2021 | Team Udayavani |

ಕಾಪು : ಅಕಾಲಿಕ ಮಳೆಯಿಂದಾಗಿ ಬೈಲು ಸಾಲಿನ ಭತ್ತದ ಗದ್ದೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು ಕಾಪು ತಾಲೂಕಿನ ವಿವಿಧೆಡೆ ಬೆಳೆದು ನಿಂತ ಭತ್ತದ ಪೈರುಗಳು ಗದ್ದೆಯಲ್ಲಿ ಮಲಗಿ ಬಿಟ್ಟಿವೆ. ಇದರಿಂದಾಗಿ ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಭೀತಿಯನ್ನು ಎದುರಿಸುವಂತಾಗಿದೆ.

Advertisement

ಕರಾವಳಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತಿರುವ ಪೈರುಗಳು ಮಕಾಡೆ ಮಲಗಿದ್ದು ಇದರಿಂದಾಗಿ ಭತ್ತದ ಕೃಷಿಕರು ತಾವು ಕಷ್ಟಪಟ್ಟು ಬೆಳೆಸಿದ ಬೆಳೆಯನ್ನು ಸುರಕ್ಷಿತಾವಗಿ ಮನೆಯೊಳಗೆ ತರಲಾಗದೇ ಕಂಗಾಲಾಗಿದ್ದಾರೆ.

ಕಾಪು ತಾಲೂಕಿನ ಕಾಪು, ಮಜೂರು, ಕಳತ್ತೂರು, ಮಲ್ಲಾರು, ಬೆಳಪು, ಎಲ್ಲೂರು ಕುಂಜೂರು, ಎರ್ಮಾಳು, ಪಡುಬಿದ್ರಿ ಶಿರ್ವ, ಕಟಪಾಡಿ, ಪಾಂಗಾಳ, ಇನ್ನಂಜೆ, ಪಲಿಮಾರು, ಹೇರೂರು, ಪಾದೂರು ಸಹಿತವಾಗಿ ಹೊಳೆ ಬದಿಯಲ್ಲಿರುವ ಭತ್ತದ ಗದ್ದೆಗಳಲ್ಲಿ ಮೊಕಾಲಿನ ವರೆಗೆ ಮಳೆ ನೀರು ನಿಂತುಕೊಂಡಿದ್ದು ಭತ್ತದ ಪೈರು ಗಳು ನೀರಿನಲ್ಲಿ ತೇಲುತ್ತಿವೆ. ಮೊದಲೇ ನೀರು ನಿಂತಿದ್ದ ಗದ್ದೆಗಳಲ್ಲಿ ಮತ್ತೆ ಮಳೆ ನೀರು ಸಂಗ್ರಹಗೊಂಡ ಪರಿಣಾಮ ಗದ್ದೆಯಲ್ಲೇ ಭತ್ತ ಮೊಳೆಕೆಯೊಡೆಯಲಾರಂಭಿಸಿದೆ.

ಕೆಲವು ಕಡೆಗಳಲ್ಲಿ ಮೊಣಕಾಲಿನವರೆಗೆ ಮಳೆ ನೀರು ನಿಂತಿರುವುದರಿಂದ ಬೈಲು ಸಾಲಿನ ಭತ್ತದ ಗದ್ದೆಗಳಲ್ಲಿ ರೈತರು ಭತ್ತದ ಕೊಯ್ಲು ನಡೆಸಲು ಕೂಡಾ ಹಿಂಜರಿಯುವಂತಾಗಿದೆ. ಗ್ರಾಮೀಣ ಪ್ರದೇಶಗಳ ಬಹುತೇಕ ಕಡೆಗಳಿಗೆ ಗ್ರಾಮಕ್ಕೆ ಒಂದು, ಎರಡರಂತೆ ಈಗಾಗಲೇ ಬಾಡಿಗೆ ಕೊಯ್ಲು ಯಂತ್ರಗಳು ಬಂದಿವೆಯಾದರೂ ಅದನ್ನು ಕೂಡಾ ಸಮರ್ಪಕವಾಗಿ ಬಳಸಿಕೊಳ್ಳಲಾಗದ ಸಂದಿಗ್ಧತೆ ರೈತರನ್ನು ಕಾಡುತ್ತಿದೆ. ಭತ್ತದ ಗದ್ದೆಯಲ್ಲಿ ಕಟಾವು ಯಂತ್ರ ಓಡಾಡಿದರೆ ಮತ್ತಷ್ಟು ಬೆಳೆ ಹಾನಿಯ ಭೀತಿ ಎದುರಾಗಿದೆ.

ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಹಾಳಾಗಿರುವ ಭತ್ತದ ಬೆಳೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು  ಪರಿಶೀಲಿಸಿ, ಹಾನಿಯ ಬಗ್ಗೆ ಅಂದಾಜು ಪಟ್ಟಿ ಮಾಡಿ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಕಳತ್ತೂರು, ಹೆಜಮಾಡಿ, ಮಜೂರು, ಕುಂಜೂರು, ಎಲ್ಲೂರು, ಬೆಳಪು ಸಹಿತ ವಿವಿಧ ಪ್ರದೇಶಗಳಲ್ಲಿನ ಭತ್ತ ಬೆಳೆಯುವ ಕೃಷಿಕರು ಆಗ್ರಹಿಸುತ್ತಿದ್ದಾರೆ.

Advertisement

ಬೆಂಬಲ ಬೆಲೆ ಘೋಷಿಸಿ, ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ : ಮಜೂರು, ಹೇರೂರು, ಪಾದೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಟಾವು ಹಂತದಲ್ಲಿನ ಭತ್ತದ ಬೆಳೆ ಗಾಳಿ ಮತ್ತು ಧಾರಾಕಾರ ಮಳೆಗೆ ಕಟಾವಿಗೆ ಬಂದಿರುವ ಭತ್ತದ ಪೈರುಗಳು ನೆಲ ಕಚ್ಚಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ತುರ್ತಾಗಿ ಸ್ಪಂಽಸಿ, ವರದಿ ಸಿದ್ಧ ಪಡಿಸಿ, ಇಲಾಖೆಯಿಂದ ಪರಿಹಾರ ದೊರಕಿಸಿ ಕೊಡಲು ಪ್ರಯತ್ನಿಬೇಕಿದೆ. ಸರಕಾರ ಕೂಡಾ ಈ ಬಗ್ಗೆ ವಿಶೇಷ ಗಮನಹರಿಸಿ ವಿಶೇಷ ಆರ್ಥಿಕ ಪರಿಹಾರ ನೀಡಲು ಮುಂದಾಗಬೇಕಿದೆ. ಮತ್ತು ಕಟಾವಿಗೆ ಮೊದಲೇ ಭತ್ತಕ್ಕೆ ಬೆಂಬಲ ಬೆಲೆಯನ್ನು ಘೋಷಿಸುವ ಅಗತ್ಯತೆಯಿದೆ ಎಂದು ಕೃಷಿಕರಾದ ಪ್ರಭಾವತಿ, ಭಾಸ್ಕರ ಪೂಜಾರಿ ಕರಂದಾಡಿ, ಪುನೀತ್ ಕುಮಾರ್ ಆಗ್ರಹಿಸಿದ್ದಾರೆ.

ಭತ್ತ ಪೈರು ಬೆಳೆದಿದ್ದು, ಕಟಾವಿನ ಸಮಯದಲ್ಲೇ ಮಳೆ ಬಂದು ಕಟಾವು ನಡೆಸದ ಸ್ಥಿತಿಗೆ ತಲುಪಿದ್ದೇವೆ. ಕೊಯ್ಲು ನಡೆಸದಿದ್ದರೆ ಭತ್ತ ಗದ್ದೆಯಲ್ಲೇ ಬಿದ್ದು ಮೊಳಕೆಯೊಡುವ ಭೀತಿ ಎದುರಾಗಿದೆ. ಮಳೆ ಬಂದು ಗದ್ದೆಯಲ್ಲಿ ನೀರು ನಿಂತ ಪರಿಣಾಮ ಕಟಾವು ಯಂತ್ರಗಳನ್ನು ಗದ್ದೆಗೆ ಇಳಿಸಲಾಗದ ಸ್ಥಿತಿ ಎದುರಾಗಿದೆ. ಆಗಾಗ್ಗೆ ಮಳೆ ಸುರಿಯುತ್ತಿರುವುದರಿಂದ ಬೈ ಹುಲ್ಲು ಕೂಈಡಾ ಹಾಳಾಗುವ ಭೀತಿ ಎದುರಾಗಿದೆ. ಇನ್ನೂ ಕೂಡಾ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಣೆಯಾಗದ ಪರಿಣಾಮ ಕಟಾವಿನ ಬಳಿಕ ಭತ್ತವನ್ನು ಮಾರುವುದು ಹೇಗೆ ಎಂಬ ಗೊಂದಲವೂ ಇದೆ. ಭತ್ತ ಖರೀದಿದಾರರೂ ಕೂಡಾ ಒಣ ಭತ್ತವನ್ನು ಮಾತ್ರಾ ಸ್ವೀಕರಿಸುತ್ತಿದ್ದು ಭತ್ತದ ಕೃಷಿಕರ ಪಾಡು ಅಯೋಮಯವಾಗಿ ಬಿಟ್ಟಿದೆ ಎಂದು ಕೃಷಿಕರು ಮತ್ತು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರು ಪ್ರವೀಣ್ ಕುಮಾರ್ ಗುರ್ಮೆ ಹೇಳಿದರು.

ಅಕಾಲಿಕ ಮಳೆಯಿಂದಾಗಿ ವಿವಿಧೆಡೆ ಭತ್ತದ ಬೆಳೆಗೆ ಹಾನಿಯುಂಟಾಗಿದ್ದು ಹೆಜಮಾಡಿ ಗ್ರಾಮದಲ್ಲಿ ಕೃಷಿಕರ ದೂರಿನ ಹಿನ್ನೆಲೆಯಲ್ಲಿ ಬೆಳೆ ಹಾನಿ ಬಗ್ಗೆ ಸ್ಥಳ ಸಮೀಕ್ಷೆ ನಡೆಸಲಾಗಿದೆ. ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯು ಜಂಟಿ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಅರ್ಜೀ ಸ್ವೀಕಾರ, ವರದಿ ಸಲ್ಲಿಕೆಯ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಭತ್ತದ ಬೆಳೆ ಹಾನಿಗೆ ಎರಡೂವರೆ ಎಕರೆಗೆ ೬,೮೦೦ ರೂ. ಪರಿಹಾರ ವಿತರಿಸಲು ಅವಕಾಶವಿದ್ದು, ಬೆಳೆ ಹಾನಿಯ ಬಗ್ಗೆ ರೈತರು ಕೃಷಿ ಅಽಕಾರಿಗಳನ್ನು ಸಂಪರ್ಕಿಸ ಬಹುದಾಗಿದೆ ಎಂದು ಕಾಪು ತಾಲೂಕು ಕೃಷಿ ಅಧಿಕಾರಿ ಪುಷ್ಪಲತಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next