Advertisement

ಮಳೆಗಾಲದಲ್ಲಿ ಏನೇನು ರಾದ್ಧಾಂತ ಕಾದಿದೆಯೋ?

05:38 PM May 23, 2021 | Team Udayavani |

ವರದಿ : ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಮಳೆಗಾಲವೇ ಆರಂಭವಾಗಿಲ್ಲ. ಬಿದ್ದ ಪೂರ್ವ ಮುಂಗಾರು ಒಂದೆರಡು ಮಳೆಗೆ ಹುಬ್ಬಳ್ಳಿ-ಧಾರವಾಡ ಅನೇಕ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.

ರಸ್ತೆ-ಚರಂಡಿ ಕಾಮಗಾರಿಗಳು ಪ್ರಗತಿಯ ಹಣೆಪಟ್ಟಿ ಹೊತ್ತು ನಿಂತಿವೆ. ಸಾಂಕ್ರಾಮಿಕ ರೋಗ ಉಲ್ಬಣ ಕಾಲವಾಗಿದ್ದು, ಪಾಲಿಕೆ ಎಚ್ಚೆತ್ತುಕೊಳ್ಳಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗಿದೆ. ಸಾಮಾನ್ಯವಾಗಿ ಮುಂಗಾರು ಮಳೆ ಪೂರ್ವದಲ್ಲಿಯೇ ಚರಂಡಿ-ಗಟಾರಗಳ ಸ್ವತ್ಛತೆ, ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಪೂರಕ ವ್ಯವಸ್ಥೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಡೆಯವ ನಿಟ್ಟಿನಲ್ಲಿ ಅಗತ್ಯ ಯೋಜನೆ ಪಾಲಿಕೆಯಿಂದ ಆಗಬೇಕು. ಆದರೆ, ಈ ಬಾರಿ ಕೊರೊನಾ ನೆಪದಲ್ಲಿ ಇಂತಹ ಕಾರ್ಯಗಳ ಕಡೆ ಗಮನ ನೀಡುವುದು ಬಹುತೇಕ ಇಲ್ಲವಾಗಿದೆ.

ಅವಳಿನಗರದ ಕೆಲ ಪ್ರಮುಖ ರಸ್ತೆಗಳು ಒಂದೇ ಮಳೆಗೆ ಕೆರೆಯ ರೂಪ ತಾಳಿವೆ. ಮಾರುಕಟ್ಟೆ, ಮನೆಗಳಿಗೆ ನೀರು ನುಗ್ಗಿದೆ. ಮ್ಯಾನ್‌ಹೋಲ್‌ಗ‌ಳು ತುಂಬಿ ಹರಿಯುತ್ತಿವೆ. ಮುಂಗಾರು ಮಳೆ ಆರಂಭವಾದರೆ ಗತಿ ಏನು ಎಂಬ ಚಿಂತೆ ನಾಗರಿಕರದ್ದಾಗಿದೆ. ಸಾಂಕ್ರಾಮಿಕ ವ್ಯಾಧಿ ಹರಡದ ರೀತಿಯಲ್ಲಿ, ಮಳೆಯಿಂದಾಗುವ ಅನಾಹುತ ತಪ್ಪಿಸಲು ಪಾಲಿಕೆ ಅಗತ್ಯ ಕ್ರಮಗಳಿಗೆ ಮುಂದಾಗಬೇಕಾಗಿದೆ.

ರಸ್ತೆಯಲ್ಲೇ ನೀರುನಿಲ್ಲುವುದು ಮಾತ್ರ ನಿಂತಿಲ್ಲ

Advertisement

ದೇಸಾಯಿ ನಗರದ ರೈಲ್ವೆ ಮೇಲ್ಸೇತುವೆ ಕೆಳಗಡೆ ಮಳೆ ಬಂದರೆ ಸಾಕು ನೀರು ನಿಲ್ಲುತ್ತದೆ ಎಂಬ ಕಾರಣಕ್ಕೆ ಅದನ್ನು ಸರಿಪಡಿಸುವ, ರಸ್ತೆಯನ್ನು ಸಿಸಿ ರಸ್ತೆಯನ್ನಾಗಿಸುವ ಕ್ರಮ ಕೈಗೊಳ್ಳಲಾಗಿತ್ತು. ಸಿಸಿ ರಸ್ತೆ ನಿರ್ಮಾಣ ಮಾಡಿದ ನಂತರವೂ ಅಲ್ಲಿ ನೀರು ನಿಲ್ಲುವುದು ನಿಂತಿಲ್ಲ ಎಂದರೆ ಎಂಜಿನಿಯರ್‌ಗಳು ಹೇಗೆ ಯೋಜಿಸಿದರು ಎಂಬುದೇ ಅನೇಕರನ್ನು ಕಾಡುವ ಪ್ರಶ್ನೆಯಾಗಿದೆ. ಸ್ವಲ್ಪ ಮಳೆ ಬಿದ್ದರೂ ಸಾಕು ಸೇತುವೆ ಕೆಳಗಡೆ ಒಂದು ಬದಿಯ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ.

ಸಾಂಕ್ರಾಮಿಕ ರೋಗ ಭೀತಿ

ಮುಂಗಾರು ಆರಂಭ ವಿವಿಧ ಸಾಂಕ್ರಾಮಿಕ ರೋಗ ಹರಡುವ ಕಾಲಘಟ್ಟ. ಈ ಅವಧಿಯಲ್ಲಿ ಸ್ವತ್ಛತೆ, ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು. ನೀರು ನಿಲ್ಲುವುದರಿಂದ, ಕೊಚ್ಚೆಯಿಂದಾಗಿ ಸೊಳ್ಳೆ, ಕ್ರಿಮಿಕೀಟಗಳು ವೃದ್ಧಿಸುತ್ತವೆ. ಅತಿಸಾರ, ಕೆಮ್ಮು-ನೆಗಡಿ, ಜ್ವರ, ಡೆಂಘೀ, ಚಿಕೂನ್‌ ಗುನ್ಯಾದಂತಹ ವ್ಯಾಧಿಗಳು ಬಾಧಿಸುತ್ತವೆ. ಇದೀಗ ಕೊರೊನಾ ಕಾಟವೂ ಕಾಡತೊಡಗಿದ್ದು, ಇದಕ್ಕೆ ಇತರೆ ಸಾಂಕ್ರಾಮಿಕ ವ್ಯಾಧಿಗಳು ಸೇರಿಕೊಂಡು ಬಿಟ್ಟರೆ ಗತಿ ಏನು? ನೀರು ನಿಲ್ಲುವ ಬಡಾವಣೆಗಳು, ಕೊಳಗೇರಿ ಪ್ರದೇಶ, ತಗ್ಗು ಜಾಗಗಳು, ತ್ಯಾಜ್ಯ ಗುಂಡಿಗಳಂತಾದ ಖಾಲಿ ನಿವೇಶನಗಳತ್ತ ಹೆಚ್ಚು ಗಮನ ಹರಿಸಬೇಕಿದೆ. ಖಾಲಿ ನಿವೇಶನಗಳ ಸ್ವತ್ಛತೆಯನ್ನು ಮಾಲೀಕರ ಮಾಡಿಕೊಳ್ಳಬೇಕು, ಇಲ್ಲವಾದರೆ ಪಾಲಿಕೆಯಿಂದಲೇ ಸ್ವತ್ಛಗೊಳಿಸಿ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂಬ ಪಾಲಿಕೆ ನಿರ್ಧಾರ ಅನುಷ್ಠಾನವೇ ಆಗಿಲ್ಲ

ಮಳೆಯ ನೀರೋ-ಚರಂಡಿ ನೀರೋ ತಿಳಿಯದ ಸ್ಥಿತಿ

ಮ್ಯಾನ್‌ಹೋಲ್‌ಗ‌ಳ ಕಥೆಯಂತೂ ಹೇಳುವುದೇ ಬೇಡ. ಸಾಮಾನ್ಯ ದಿನಗಳಲ್ಲಿಯೇ ಅನೇಕ ಕಡೆಗಳಲ್ಲಿ ಮ್ಯಾನ್‌ಹೋಲ್‌ಗ‌ಳಲ್ಲಿ ತುಂಬಿ ಹರಿಯುತ್ತವೆ. ಇನ್ನು ಮಳೆಗಾಲ ಬಂತೆಂದರೆ ಸಾಕು ಮ್ಯಾನ್‌ಹೋಲ್‌ ನೀರು ಯಾವುದೋ, ಮಳೆ ನೀರು ಯಾವುದೋ ಎಂಬುದೇ ತಿಳಿಯದ ಸ್ಥಿತಿ ಇರುತ್ತದೆ. ಮಳೆಗಾಲದಲ್ಲಿ ಬಹುತೇಕ ಮ್ಯಾನ್‌ಹೋಲ್‌ಗ‌ಳು ತುಂಬಿ ಹರಿಯುವುದು ಗ್ಯಾರೆಂಟಿ ಎಂಬ ಸ್ಥಿತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next