ಧಾರವಾಡ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಗುರುವಾರ ಸಂಜೆ ಸಹಿತ ಸಿಡಿಲು, ಗುಡುಗು-ಮಿಂಚು ಸಹಿತ ಜೋರಾದ ಗಾಳಿಯೊಂದಿಗೆ ಒಂದೂವರೆ ಗಂಟೆಗೂ ಅಧಿಕ ಸಮಯ ಧಾರಾಕಾರವಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯಾಗಿದೆ. ಅಲ್ಲದೆ ಅಲ್ಲಲ್ಲಿ ಮರ-ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.
ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲಿಯೇ ಹೆಚ್ಚು ಸಮಯ ಮಳೆ ಸುರಿದಿದ್ದು, ಹೀಗಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟು ಮಾಡಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಒಂದಿಷ್ಟು ಹೊತ್ತು ಬಿಸಿಲು, ಮತ್ತೊಂದಿಷ್ಟು ಹೊತ್ತು ಮೋಡ ಕವಿದ ವಾತವಾರಣವಿತ್ತು. ಇದಲ್ಲದೇ ಸಂಜೆ ಹೊತ್ತಿಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು.
4 ಗಂಟೆಗೆ ಆರಂಭಗೊಂಡ ಮಳೆಯು ಒಂದೂವರೆ ತಾಸಿಗೂ ಧಾರಾಕಾರ ಮಳೆ ಸುರಿದ ಪರಿಣಾಮ ನಗರದ ಪ್ರಮುಖ ರಸ್ತೆಗಳು ಜಲಾವೃತ್ತಗೊಂಡವು. ಮಳೆಯ ನೀರು ರಸ್ತೆ ತುಂಬಿದ ಪರಿಣಾಮ ಕೋರ್ಟ್ ಸರ್ಕಲ್, ಎನ್‌ಟಿಟಿಎಫ್, ಟೋಲನಾಕಾ, ಅದೈಜ್ಞ ಕಲ್ಯಾಣ ಮಂಟಪದ ಎದುರಿನ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
ಇದಲ್ಲದೇ ಸಿಬಿಟಿ, ಅಕ್ಕಿಪೇಟೆ ಸೇರಿದಂತೆ ವಿವಿಧ ಮಾರುಕಟ್ಟೆ ಪ್ರದೇಶದಲ್ಲಿ ಮಳೆಯ ಹೊಡೆತಕ್ಕೆ ರಸ್ತೆಗಳು ಜಲಾವೃತ್ತಗೊಂಡಿದ್ದರಿಂದ ಸಂಚಾರದಲ್ಲಿ ವ್ಯತ್ಯಾಸಗೊಂಡರೆ ಇಡೀ ಮಾರುಕಟ್ಟೆ ವಹಿವಾಟು ಸ್ತಬ್ದಗೊಳ್ಳುವಂತೆ ಮಾಡಿತು. ಇನ್ನು ಹಾವೇರಿಪೇಟ್ ಸೇರಿದಂತೆ ನಗರದ ತೆಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದರೆ ಮನೆಗೆ ನುಗ್ಗಿದ ನೀರನ್ನು ಹೊರ ಹಾಕುವ ಕೆಲಸದಲ್ಲಿ ಮಹಿಳೆಯರು ತೊಡಗಿದ್ದು ಕಂಡು ಬಂದಿತು.
ಇದಲ್ಲದೇ ಕೃಷಿ ವಿವಿಗೆ ಹೋಗುವ ಮಾರ್ಗ, ಕೆವಿವಿ ಆವರಣದಲ್ಲಿ ಸೇರಿದಂತೆ ವಿವಿಧ ಕಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗಳಿದ್ದು ಕಂಡು ಬಂದರೆ ಇದರ ಪರಿಣಾಮ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇನ್ನು ನಗರವಷ್ಟೇ ಅಲ್ಲದೇ ಉಪ್ಪಿನಬೆಟಗೇರಿ, ಯಾದವಾಡ, ಲಕಮಾಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಜೋರಾದ ಮಳೆಯಾಗಿದೆ. ಇದಲ್ಲದೇ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ.