Advertisement

ಕುಂಭದ್ರೋಣ ಮಳೆಗೆ ಕಾಫಿನಾಡು ತತ್ತರ

01:09 AM Aug 09, 2019 | Sriram |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗ ಗಳಲ್ಲಿ ಗುರುವಾರವೂ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನಗಿರಿ-ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಯಲ್ಲಿ ಹಲವು ಕಡೆ ಧರೆ ಕುಸಿದಿದೆ. ಕುಸಿದ ಮಣ್ಣು ಶೋಲಾ ಕಾಡಿನೊಳಗೆ ಜಮಾವಣೆಯಾಗಿದ್ದು ಆತಂಕ ಸೃಷ್ಟಿಯಾಗಿದೆ.

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಮನೆಯೊಂದು ಬಿದ್ದಿದ್ದು, ಅದೃಷ್ಟವಶಾತ್‌ ಮನೆಯಲ್ಲಿದ್ದ ತಾಯಿ ಮತ್ತು ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಮೂಡಿಗೆರೆ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮೇಲೆ ಸುಮಾರು 4 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ.

ಶೃಂಗೇರಿ ತಾಲೂಕಿನಾದ್ಯಂತ ಗಾಳಿ-ಮಳೆ ಅವಾಂತರ ಸೃಷ್ಟಿಸಿದೆ. ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಶೃಂಗೇರಿ ಶಂಕರ ಮಠದ ಗುರುಭವನ, ಗಾಂಧಿಭವನ,
ಮಠದ ಪ್ರಸಾದ ನಿಲಯಗಳಿಗೆ ನೀರು ನುಗ್ಗಿದೆ. ನರಸಿಂಹವನಕ್ಕೆ ತೆರಳುವ ಮಾರ್ಗ ನೀರಿನಲ್ಲಿ ಮುಳುಗಿದೆ. ಮಳೆ-ಗಾಳಿಯಿಂದಾಗಿ ವಿದ್ಯುತ್‌ ಪೂರೈಕೆಯಲ್ಲೂ ವ್ಯತ್ಯಯವಾಗಿದೆ.

ನರಸಿಂಹರಾಜಪುರ ತಾಲೂಕಿನ ಕಡಹೀನಬೈಲು ಗ್ರಾಮದಲ್ಲಿ ಮನೆಯ ಮೇಲೆ ಬೃಹತ್‌ ಗಾತ್ರದ ಸಾಗವಾನಿ ಮರ ಬಿದ್ದ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಮುತ್ತಿನಕೊಪ್ಪ- ಶಂಕರಪುರ-ಮುಡುಬ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆಮ್ಮಣ್ಣುಗುಂಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಹತ್ತಗಿರಿ ಜಲಪಾತದಲ್ಲಿ ನೀರಿನ ಪ್ರಮಾಣ ತೀವ್ರವಾಗಿದ್ದು, ವೀರಭದ್ರೇಶ್ವರ ಸ್ವಾಮಿ
ದೇಗುಲ ಜಲ ದಿಗ್ಬಂಧನಗೊಂಡಿದೆ. ಕಲ್ಹತ್ತಗಿರಿ ಜಲಪಾತದತ್ತ ಪ್ರವಾಸಿಗರು ತೆರಳದಂತೆ ತಡೆಯಲಾಗುತ್ತಿದೆ.

Advertisement

ಮಾನವೀಯತೆ ಮೆರೆದ ಪೊಲೀಸರು: ಚಿಕಿತ್ಸೆಗೆ ಮಂಗಳೂರಿಗೆ ತೆರಳಬೇಕಿದ್ದ ರೋಗಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಮೂಡಿಗೆರೆ ತಾಲೂಕು ಬಣಕಲ್‌ ಗ್ರಾಮದ ಸಾದಿಕ್‌ ಎಂಬುವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಿತ್ತು. ಚಾರ್ಮಾಡಿ ಘಾಟಿಯಲ್ಲಿ ಗುಡ್ಡ
ಕುಸಿದಿದ್ದರಿಂದ ಪರದಾಡುವಂತಾಗಿತ್ತು. ವಿಚಾರ ತಿಳಿದ ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ, ಘಾಟಿಯ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದರು.
ಎಸ್‌ಪಿ ಸೂಚನೆಯನ್ವಯ ಪೊಲೀಸರು ಆ್ಯಂಬುಲೆನ್ಸ್‌ ಚಾರ್ಮಾಡಿ ಘಾಟಿಯಲ್ಲಿಯೇ ಸುರಕ್ಷಿತವಾಗಿ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next