ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿವೆ. ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ಮುಂಗಾರು ಬೆಳೆಗಳು ಹಾನಿಗೀಡಾಗಿವೆ. ರಸ್ತೆ ಸಂಚಾರ ಬಂದ್, ಕೆಲವೆಡೆ ಮನೆಗಳ ಗೋಡೆ ಕುಸಿದಿರುವುದು ವರದಿಯಾಗಿದೆ.
ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನ 24 ಗಂಟೆಯಲ್ಲಿ 57 ಮಿ.ಮೀಮಳೆಯಾಗಿರುವುದು ದಾಖಲಾಗಿದೆ. ಭಾಲ್ಕಿ ತಾಲೂಕಿನಲ್ಲಿ ಅತೀ ಹೆಚ್ಚು76 ಮಿ.ಮೀ ಮಳೆಯಾಗಿದ್ದರೆ,ಬಸವಕಲ್ಯಾಣ ತಾಲೂಕಿನಲ್ಲಿ ಕಡಿಮೆ 38ಮಿ.ಮೀ ಮಳೆ ಸುರಿದಿದೆ. ಇನ್ನುಳಿದಂತೆ ಹುಮನಾಬಾದ ತಾಲೂಕು 72ಮಿ.ಮೀ, ಕಮಲನಗರ 61 ಮಿ.ಮೀ,ಹುಲಸೂರು 49 ಮಿ.ಮೀ, ಬೀದರ 47 ಮಿ.ಮೀ ಮತ್ತು ಚಿಟಗುಪ್ಪ ತಾಲೂಕಿನಲ್ಲಿ42 ಮಿ.ಮೀ ಮಳೆಯಾಗಿದೆ.
ಮಳೆಗೆ ಹುಮನಾಬಾದ, ಕಮನಗರ ಹಾಗೂ ಭಾಲ್ಕಿ ತಾಲೂಕಿನಲ್ಲಿ ಅಪಾರ ನಷ್ಟವಾಗಿದೆ. ಹುಮನಾಬಾದ ತಾಲೂಕಿನ ಬೋತಗಿ ಗ್ರಾಮದ ಕೂಡು ರಸ್ತೆಯ ಸೇತುವೆ ಮೇಲಿಂದ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಕೆಲ ಕಾಲ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಹುಡಗಿ ಗ್ರಾಮದ ಬಳಿ ಸೇತುವೆ ಮೇಲಿಂದ ನೀರು ಹರಿದು ಸಂಚಾರ ಕಡಿತವಾಗಿದ್ದರೆ, ಕಮಲನಗರ ತಾಲೂಕಿನ ಭೋಪಾಳಗಡ ಮತ್ತು ಜಮಾಲಪುರ ಕೆರೆಗಳ ಹೊರ ಹರಿವು ಹೆಚ್ಚಾಗಿ ರೈತರ ಗದ್ದೆಗಳಿಗೆ ನೀರು ನುಗ್ಗಿದೆ.
ಹಂದಿಕೇರಾ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಭಾಲ್ಕಿ ಮತ್ತು ಹುಮನಾಬಾದತಾಲೂಕಿನಲ್ಲಿ ಮಳೆಗೆ ರೈತರ ಗದ್ದೆಯಲ್ಲಿನ ಮಣ್ಣು ನೀರು ಪಾಲಾಗಿದೆ. ಜಮೀನಿಗೆ ಮಳೆ ನೀರು ನುಗ್ಗಿದ ಪರಿಣಾಮರಾಶಿಗೆಬಂದಿರುವ ಉದ್ದು ಮತ್ತು ತೊಗರಿ ಬೆಳೆಹಾಳಾಗಿದೆ. ಜತೆಗೆ ವಾಣಿಜ್ಯ ಬೆಳೆ ಕಬ್ಬು ಮತ್ತು ಸೋಯಾಬಿನ್ ಬೆಳೆಗೂ ಧಕ್ಕೆ ಆಗಿದೆ.
ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ವರ್ಷಧಾರೆಯಿಂದ ಜಿಲ್ಲೆಯಲ್ಲಿ ಈವರೆಗೆ 37,410 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮುಂಗಾರು ಬೆಳೆ ನೀರು ಪಾಲಾಗಿದೆ.ಇದು ಜಿಲ್ಲೆಯಲ್ಲಿ ಬಿತ್ತನೆಯಾದ ಒಟ್ಟು ಪ್ರದೇಶದ ಶೇ.10.17 ಬಸವಕಲ್ಯಾಣ ತಾಲೂಕಿನಲ್ಲಿ 18,887 ಹೆಕ್ಟೇರ್, ಹುಮನಾಬಾದ-6807 ಹೆಕ್ಟೇರ್, ಭಾಲ್ಕಿ 4867 ಹೆಕ್ಟೇರ್, ಬೀದರ 3949 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಜಿಲ್ಲೆಯ ಮಾಂಜ್ರಾದಲ್ಲಿ ನದಿ ನೀರಿನ ಹರಿವು ಹೆಚ್ಚಾಗಿದೆ. ಮಳೆ ನೀರುಜತೆಗೆ ಮಹಾರಾಷ್ಟ್ರದ ಕೊಯ್ನಾಹಾಗೂ ಧನೆಗಾಂವ್ ಜಲಾಶಯದಿಂದ ಹೊರ ಬಿಡುತ್ತಿದ್ದಾರೆನ್ನಲಾದ ಹೆಚ್ಚುವರಿ ನೀರಿನಿಂದ ನದಿ ತಟದ ಗ್ರಾಮಗಳಲ್ಲಿ ನೆರೆ ಭೀತಿ ಆವರಿಸಿದೆ. ಈಗಾಗಲೇ ಜಿಲ್ಲಾಡಳಿತ ನದಿ ತಟದ ಗ್ರಾಮಗಳಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದೆ.