Advertisement
ಬೇಸಿಗೆ ಸಮಯದಲ್ಲಿ ಎಲ್ಲ ನದಿಗಳ ಒಡಲು ಪೂರ್ಣ ಬರಿದಾಗಿದ್ದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿತ್ತು. ಜಿಲ್ಲೆಯ ಜೀವನದಿ ಕೃಷ್ಣಾ ಸಂಫೂರ್ಣ ಬತ್ತಿದ್ದರಿಂದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿತ್ತು. ನದಿ ಪಾತ್ರದ ಜನರ ನೀರಿನ ದಾಹ ತಣಿಸಲು ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡಿಸಬೇಕು ಎಂದು ಹೋರಾಟಗಳು ಸಹ ನಡೆದಿದ್ದವು. ಆದರೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬರಲಿಲ್ಲ.
ಜಲಾಶಯಗಳಿಗೆ ಕಳೆ: ಹಿಡಕಲ್, ಮಲಪ್ರಭಾ ಹಾಗೂ ಮಾರ್ಕಂಡೇಯ ಜಲಾಶಯಗಳ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ ಕುಡಿಯುವ ನೀರಿನ ಕೊರತೆ ಉಂಟಾಗಿತ್ತು. ಮೊದಲೇ ಭೀಕರ ಬರಗಾಲದಿಂದ ತತ್ತರಿಸಿದ್ದ ರೈತ ಸಮುದಾಯಕ್ಕೆ ಜಲಾಶಯಗಳು ಖಾಲಿಯಾಗಿ ಮತ್ತಷ್ಟು ಆತಂಕ ಹೆಚ್ಚಿಸಿದ್ದವು. ಆದರೆ ಕಳೆದ ಎರಡು ವಾರಗಳಿಂದ ಬೀಳುತ್ತಿರುವ ಮಳೆ ಹಾಗೂ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕುಡಿಯುವ ನೀರಿನ ಹಾಗೂ ನೀರಾವರಿಯ ಆತಂಕ ದೂರವಾಗುವ ವಿಶ್ವಾಸ ಮೂಡಿದೆ. ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಹಿಡಕಲ್ಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಒಂದೇ ದಿನದಲ್ಲಿ ನಾಲ್ಕು ಅಡಿಗಳಷ್ಟು ನೀರಿನಮಟ್ಟ ಏರಿಕೆಯಾಗಿದೆ. ಈಗ ಜಲಾಶಯಕ್ಕೆ 24 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಒಟ್ಟು 2,175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2,119 ಅಡಿಗಳಷ್ಟು ನೀರು ಸಂಗ್ರಹವಾಗಿದೆ.
Related Articles
ರಕ್ಕಸಕೊಪ್ಪಕ್ಕೆ ನೀರು: ಬೆಳಗಾವಿ ನಗರಕ್ಕೆ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ತಿಂಗಳಷ್ಟೆ ಜಲಾಶಯದಲ್ಲಿ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದರಿಂದ ಬೆಳಗಾವಿಯ ಜನ ವಾರಕ್ಕೊಮ್ಮೆ ಕೆಲವು ಪ್ರದೇಶದಲ್ಲಿ 10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈಗ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬರುತ್ತಿದ್ದು ರಕ್ಕಸಕೊಪ್ಪ ಮೊದಲಿನಂತೆ ಕಂಗೊಳಿಸುತ್ತಿದೆ. ಜಲಾಶಯ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗುತ್ತಿರುವದರಿಂದ ನೀರಿನ ಮಟ್ಟ ಏರಿಕೆಯಾಗಿದೆ. ಒಟ್ಟು 2476.50 ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗ 2465 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವದರಿಂದ ಜುಲೈ ಅಂತ್ಯದ ವೇಳೆಗೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂಬುದು ಜಲಮಂಡಳಿ ಅಧಿಕಾರಿಗಳ ಹೇಳಿಕೆ.
Advertisement