Advertisement

ರಾಜಧಾನಿಯಲಿ ವರುಣನ ಅಬ್ಬರಕ್ಕೆ ಓರ್ವ ಬಲಿ ; ಜನಜೀವನ ಅಸ್ತವ್ಯಸ್ತ

01:20 PM Jan 07, 2021 | Team Udayavani |

ಬೆಂಗಳೂರು: ನಗರದಲ್ಲಿ ಬುಧವಾರ ಚಳಿ ಜತೆಗೆ ಮಳೆಯೂ ಕೈಜೋಡಿಸಿತು. ಇಡೀ ದಿನದ ವರುಣನ ಅಬ್ಬರಕ್ಕೆ ಓರ್ವ
ಬಲಿಯಾಗಿದ್ದು, ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.ಈ ಮಧ್ಯೆ ತಿಲಕ್‌ ನಗರದ ನಿವಾಸಿ ವೆಂಕಟೇಶ್‌ (44) ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಿಲಕ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಮೃತರು ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ
ರಸ್ತೆಯಲ್ಲಿ ಬಿದಿದ್ದ ವಿದ್ಯುತ್‌ ತಂತಿ ತುಳಿದ ಪರಿಣಾಮ ಮೃತಪಟ್ಟಿದ್ದಾರೆ.

Advertisement

ಮತ್ತೂಂದೆಡೆ ಬೆಳಗ್ಗೆಯೇ ಮೋಡಕವಿದ ವಾತಾವರಣ ಇತ್ತು. 10ರ ಸುಮಾರಿಗೆ ಅಲ್ಲಲ್ಲಿ ಮಳೆ ಹನಿಯಲು ಶುರುವಾಯಿತು.
ನಂತರದಲ್ಲಿ ಬಿರುಸುಗೊಂಡಿತು. ಆಗಾಗ್ಗೆ ವಿರಾಮ ನೀಡಿದಂತೆ ಕಂಡುಬರುತ್ತಿದ್ದ ವರುಣ, ಕೆಲಹೊತ್ತಿನಲ್ಲೇ ಮತ್ತೆ ಅಬ್ಬರಿಸುತ್ತಿದ್ದ. ಇದರಿಂದ ಪ್ರಮುಖ ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳು, ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಯಿತು. ಸಂಜೆ
ಮಳೆ ಪ್ರಮಾಣ ಹೆಚ್ಚಿದ್ದರಿಂದ ಈ ದೃಶ್ಯ ಪುನರಾವರ್ತನೆ ಮಾತ್ರವಲ್ಲ; ವಾಹನ ಸವಾರರಿಗೆ ದಟ್ಟಣೆ ಬಿಸಿ ತುಸು ಜೋರಾಗಿಯೇ ತಟ್ಟಿತು.

ಇದನ್ನೂ ಓದಿ:ಜಾಡ್ಸಿ ಒದ್ದರೆ… : ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾನೂನು ಸಚಿವರ ನೀತಿ ಪಾಠ!

ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಜನ ಸಾರ್ವಜನಿಕ ಸಾರಿಗೆಗಿಂತ ಸಹಜವಾಗಿ ಸ್ವಂತ ವಾಹನಗಳೊಂದಿಗೆ ರಸ್ತೆಗಿಳಿಯುತ್ತಿದ್ದಾರೆ. ಆದರೆ, ಚಳಿ ಮತ್ತು ಅಕಾಲಿಕ ಮಳೆಗೆ ಗಡಗಡ ನಡುಗಿದರು. ಈ ಮಧ್ಯೆ ಟ್ರಾಕ್‌ನಲ್ಲಿ ಹೆಚ್ಚು ಹೊತ್ತು ಕಳೆಯಬೇಕಾಗಿದ್ದರಿಂದ ಮತ್ತಷ್ಟು ಕಿರಿಕಿರಿ ಉಂಟಾಯಿತು. ಅಲ್ಲಲ್ಲಿ ರಸ್ತೆ ಕೂಡ ಹದಗೆಟ್ಟಿದ್ದರಿಂದ ಹೋಗುವ ಭರದಲ್ಲಿ ಗುಂಡಿಗಳಲ್ಲಿ ವಾಹನಗಳನ್ನು ಇಳಿಸಿದ್ದರಿಂದ ಆಯತಪ್ಪದಂತೆ ಎಚ್ಚರ ವಹಿಸುವ ಮತ್ತು ಗುಂಡಿಗಳನ್ನು ತಪ್ಪಿಸಲು ಸರ್ಕಸ್‌ ಮಾಡುತ್ತಿರುವುದು ಕಂಡುಬಂತು.

ಎಲ್ಲಿ ಎಷ್ಟು ಮಳೆ?
ರಾಜಾಜಿನಗರ ಮತ್ತು ಅರಕೆರೆಯಲ್ಲಿ ತಲಾ 15.5 ಮಿ.ಮೀ. ಮಳೆಯಾಗಿದೆ. ದಯಾನಂದನಗರ 14.5, ಕೊಟ್ಟಿಗೆ ಪಾಳ್ಯ 13.5, ಸಂಪಂಗಿರಾಮನಗರ 13, ಮಾರುತಿ ಮಂದಿರ, ಬಿಟಿಎಂ ಬಡಾವಣೆ ಹಾಗೂ ನಾಗರಬಾವಿಯಲ್ಲಿ ತಲಾ 12, ಬೇಗೂರು ಮತ್ತು
ಹೊಯ್ಸಳನಗರ 11.5, ರಾಜಮಹಲ್‌ ಗುಟ್ಟಹಳ್ಳಿ 11, ವಿಜ್ಞಾನನಗರ ಹಾಗೂ ಆರ್‌.ಆರ್‌. ನಗರ 10.5, ಹೆರೋಹಳ್ಳಿ ಮತ್ತು ಅಗ್ರಹಾರ ದಾಸರಹಳ್ಳಿ ತಲಾ 10, ಕೆಂಗೇರಿ 9, ಗೊಟ್ಟಿಗೆರೆ ಹಾಗೂ ಎಚ್‌ಎಎಲ್‌ ವಿಮಾನ ನಿಲ್ದಾಣ ತಲಾ 8.5, ದೊಡ್ಡಾನೆಕ್ಕುಂದಿ 7.5, ದೊಮ್ಮಲೂರು ಮತ್ತು ವಿದ್ಯಾರಣ್ಯಪುರ ತಲಾ 6.5, ಬಾಣಸವಾಡಿ 5 ಮಿ.ಮೀ. ಮಳೆ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next