ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ ಸುತ್ತ ಭಾರಿ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಗೆ 2,28,121 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರವಾಹ ಉಂಟಾಗದಂತೆ ಎಚ್ಚರಿಕೆ ವಹಿಸಲು ಆಲಮಟ್ಟಿ ಜಲಾಶಯದಿಂದ 2,58,710 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯಕ್ಕೆ 2.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಜತೆಗೆ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದರೆ, ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಕೈ ಮೀರುತ್ತದೆ. ಇಂತಹ ಪರಿಸ್ಥಿತಿ 2007 ಮತ್ತು 2009ರಲ್ಲಿ ಉಂಟಾಗಿತ್ತು. ಹೀಗಾಗಿ ಸಧ್ಯ ಎಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆಯೋ, ಅಷ್ಟೇ ಪ್ರಮಾಣದ ನೀರು, ಜಲಾಶಯದಿಂದ ಹೊರ ಬಿಟ್ಟು, ಪ್ರವಾಹ ಉಂಟಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸುತ್ತಿದೆ.
8 ಸೇತುವೆ ಜಲಾವೃತ :
ಕಳೆದ ಐದು ವರ್ಷಗಳಿಂದ ಬರ ಎದುರಿಸಿದ್ದ ಜಿಲ್ಲೆಯ ಜನರು, ಈ ಭಾರಿ ನದಿ ಪಾತ್ರದಲ್ಲಿ ಭರ್ತಿ ನೀರು ಕಾಣುತ್ತಿದ್ದಾರೆ. ಘಟಪ್ರಭಾ ನದಿಯ 5 ಸೇತುವೆ ಸಹಿತ ಬ್ಯಾರೇಜ್ ಹಾಗೂ ಕೃಷ್ಣಾ ನದಿಯ ಜಮಖಂಡಿ ತಾಲೂಕು ವ್ಯಾಪ್ತಿಯ ಮೂರು ಸೇತುವೆಗಳು ಜಲಾವೃತಗೊಂಡಿವೆ. ಹೀಗಾಗಿ ಜನರು ಸುಮಾರು 25ರಿಂದ 40 ಕಿ.ಮೀ ವರೆಗೆ ಸುತ್ತಿ ತಮ್ಮೂರು ಸೇರುತ್ತಿದ್ದಾರೆ.
Advertisement
10 ಕುಟುಂಬ ಸುರಕ್ಷಿತ ಸ್ಥಳಕ್ಕೆ :ಜಮಖಂಡಿ ತಾಲೂಕಿನ ಮುತ್ತೂರ ಗ್ರಾಮ, ಕೃಷ್ಣಾ ನದಿಗೆ ಹೊಂದಿಕೊಂಡಿದ್ದು, ನದಿ ಪಕ್ಕದಲ್ಲಿದ್ದ 10 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ಗ್ರಾಮದಲ್ಲಿ (ಭಾಗಶಃ ಮುಳುಗಡೆ ಗ್ರಾಮ) 38 ಕುಟುಂಬಗಳು ನದಿ ಪಕ್ಕದಲ್ಲಿದ್ದು, ಅವರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಎಸಿ ಅಕ್ರಮ ಷರಿಫ್, ತಹಶೀಲ್ದಾರರು ಪ್ರವಾಹ ಭೀತಿ ಎದುರಿಸುತ್ತಿರುವ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಇತ್ತ ಬಾಗಲಕೋಟೆಯಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಸಂಜೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಸಿದ್ಧತೆಯಲ್ಲಿರುವ ಅಧಿಕಾರಿಗಳಿಗೆ ಸೂಚಿಸಿದರು.