ಕೊಟ್ಟಿಗೆಹಾರ : ಸಮೀಪದ ಮತ್ತಿಕಟ್ಟೆಯಲ್ಲಿ ಸೋಮವಾರ ಸುರಿದ ಮಳೆಗೆ ಮನೆಯೊಂದು ಅರ್ಧ ಭಾಗ ಕುಸಿದಿದ್ದು ಆ ಕುಟುಂಬ ಮಳೆಯ ನಡುವೆಯೇ ಆ ಮನೆಯಲ್ಲಿಯೇ ವಾಸಿಸುವಂತಾಗಿದೆ.
ಎಡೆಬಿಡದೇ ಮಳೆ ಸುರಿದ ಪರಿಣಾಮ ಮತ್ತಿಕಟ್ಟೆಯ ಬಾಬುಗೌಡ ಎಂಬವರ ಮನೆಯ ಅರ್ಧ ಭಾಗದ ಗೋಡೆ ಕುಸಿದಿದ್ದು, ಮಳೆಗೆ ಅಲ್ಲಿಯೇ ಟಾರ್ಪಾಲ್ ಹಾಕಿಕೊಂಡು ಅದೇ ಮನೆಯ ಹಿಂಭಾಗದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಹೆಚ್ಚಾದರೆ ಇಡೀ ಮನೆಯೇ ಕುಸಿಯುವ ಭೀತಿಯಲ್ಲಿದ್ದು ಕುಟುಂಬದವರು ಅಸಹಾಯಕ ಸ್ಥಿತಿಯಲ್ಲಿ ಬದುಕುವಂತಾಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಾಬುಗೌಡ, ಕಳೆದ ಬಾರಿಯು ನಮ್ಮ ಮನೆ ಕುಸಿದಿದ್ದು ಯಾವುದೇ ಪರಿಹಾರ ಬಂದಿಲ್ಲ. ಈ ಬಾರಿಯು ಮನೆ ಕುಸಿದಿದ್ದು ಬಣಕಲ್ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದೇವೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಸತೀಶ್ ಮತ್ತಿಕಟ್ಟ್ಷೆ ಅವರು ಮನೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ದಸರಾ ಆನೆಗಳಿಗೆ ಭೋಜನದ ಮೆನು ಸಿದ್ಧ
ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಮಾತನಾಡಿ, ಕಳೆದ ಬಾರಿಯೂ ಬಾಬುಗೌಡರ ಮನೆ ಕುಸಿದಿತ್ತು. ಆಗಲೂ ಇವರ ಮನವಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಆದರೂ ಇವರಿಗೆ ಈವರೆಗೆ ಯಾವುದೇ ಅನುದಾನ ಬಂದಿಲ್ಲ. ಈ ಬಾರಿಯೂ ಅವರ ಮನೆ ಕುಸಿದಿದ್ದು, ಹಿರಿಯ ಅಧಿಕಾರಿಗಳು ಸೂಕ್ತ ವರದಿ ನೀಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.