ಹುಣಸೂರು : ನಾಗರಹೊಳೆ ಉದ್ಯಾನದಂಚಿನ ನೇರಳಕುಪ್ಪೆ, ಕಡೇಮನುಗನಹಳ್ಳಿ ಗ್ರಾ,ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಸಂಜೆ ಬಾರೀ ಮಳೆ ಬಿದ್ದ ಪರಿಣಾಮ ಹನಗೋಡು – ಪಂಚವಳ್ಳಿ ಮುಖ್ಯ ರಸ್ತೆಯ ಹೆಬ್ಬಾಳ ಸೇತುವೆ ಮೇಲೆ ಮೂರು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ರಸ್ತೆ ಬಂದ್ ಆಗಿದೆ. ನೀರಿನ ಹರಿವನ್ನು ವೀಕ್ಷಿಸಲು ಸಾಕಷ್ಟು ಮಂದಿ ಜಮಾಯಿಸಿದ್ದರು.
ನಾಗರಹೊಳೆ ಉದ್ಯಾನ ಹಾಗೂ ಅಂಚಿನ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಬಹಳ ವರ್ಷಗಳ ನಂತರ ಹೆಬ್ಬಾಳ ಸೇತುವೆ ಮೇಲೆ ಬಾರೀ ಪ್ರಮಾಣದ ನೀರು ಹರಿದಿದೆ. ಈ ನೀರು ಕಚುವಿನಹಳ್ಳಿ ಕೆರೆಗೆ ಸೇರಿ ಅಲ್ಲಿಂದ ಹನಗೋಡು ಬಳಿಯಿಂದ ಲಕ್ಷ್ಮಣ ನದಿಗೆ ಸೇರಲಿದೆ.
ಮನೆಗಳಿಗೆ ಹಾನಿ; ಬಾರೀ ಮಳೆಗೆ ಕಚುವಿನಹಳ್ಳಿಯ ಪಾರ್ವತಿ ಹೆಬ್ಬೂರಿಗೌಡ, ಉಡುವೇಪುರದ ಚಂದ್ರಶೇಖರ್ ರವರ ಮನೆ ಗೋಡೆ ಕುಸಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಮಳೆ ಮುಂದುವರೆದಲ್ಲಿ ಮತ್ತಷ್ಟು ಹಾನಿ ಹೆಚ್ಚಲಿದೆ.