Advertisement

Heavy Rain: ಕಡಬ ಪರಿಸರದಲ್ಲಿ ಭಾರೀ ಮಳೆ: ರಸ್ತೆ ಜಲಾವೃತ

05:33 AM Oct 24, 2024 | Team Udayavani |

ಕಡಬ: ಕಡಬ ಪರಿಸರದಲ್ಲಿ ಬುಧವಾರ ಸಂಜೆ ಸುಮಾರು ಒಂದೂವರೆ ತಾಸು ಸುರಿದ ಬಿರುಸಿನ ಮಳೆಗೆ ರಸ್ತೆಗಳು ನೀರಿನಿಂದ ಆವೃತವಾಗಿ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಕೆಲವೆಡೆ ಮನೆ ಹಾಗೂ ಅಂಗಡಿ ಕಟ್ಟಡಗಳ ಒಳಗೂ ನೆರೆನೀರು ನುಗ್ಗಿತು.

Advertisement

ಗ್ರಾಮೀಣ ಒಳರಸ್ತೆಗಳು ಮಾತ್ರವಲ್ಲದೆ ಪೇಟೆಯ ಮುಖ್ಯರಸ್ತೆಗಳಲ್ಲೂ ಮಳೆನೀರು ರಸ್ತೆಯಲ್ಲೇ ಹರಿಯಿತು. ಕಡಬದ ಕಾಲೇಜು ರಸ್ತೆಯಲ್ಲಿ ಉಕ್ಕಿ ಹರಿದ ಮಳೆನೀರಿನಿಂದಾಗಿ ರಸ್ತೆ ತೋಡಿನಂತಾಗಿತ್ತು. ಕಡಬದ ಸಮುದಾಯ ಆಸ್ಪತ್ರೆಯ ಆವರಣದ ವಸತಿಗೃಹಗಳ ಒಳಗೂ ನೀರು ನುಗ್ಗಿದ್ದರಿಂದ ಸಮಸ್ಯೆ ಎದುರಾಯಿತು. ರಸ್ತೆಯ ಪಕ್ಕದ ಚರಂಡಿಗಳಿಂದ ಉಕ್ಕಿದ ನೀರು ಆಸ್ಪತ್ರೆಯ ಆವರಣದೊಳಗೆ ಹರಿದುಬರುತ್ತಿ ರುವುದು ಕಂಡುಬಂತು. ಮರ್ದಾಳ ಪೇಟೆಯ ಮುಖ್ಯರಸ್ತೆ, ಬಲ್ಯ ಸರಕಾರಿ ಶಾಲೆಯ ಸಂಪರ್ಕ ರಸ್ತೆಯಲ್ಲೂ ಮಳೆನೀರು ಉಕ್ಕಿ ಹರಿಯಿತು. ತಗ್ಗು ಪ್ರದೇಶಗಳ ಗದ್ದೆ, ತೋಟಗಳಿಗೂ ಮಳೆನೀರು ನುಗ್ಗಿತ್ತು.

ಕಡಬದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದಲ್ಲಿ ಅಳವಡಿಸಲಾಗಿದ್ದ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಸೈಂಟ್‌ ಜೋಕಿಂ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಡಬ ವಲಯ ಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಬುಧವಾರ ಸ್ಥಗಿತಗೊಳಿಸಲಾಯಿತು. ಕಡಬ ಪೊಲೀಸ್‌ ಠಾಣೆ ಸಮೀಪದಲ್ಲಿ ಮರದ ರೆಂಬೆಯೊಂದು ಹೂವಿನ ಅಂಗಡಿ ಮೇಲೆ ಬಿದ್ದು ಹಾನಿಯಾಗಿದೆ.

ಸುಬ್ರಹ್ಮಣ್ಯ: ಗುಡುಗು ಸಹಿತ ಗಾಳಿ ಮಳೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ನೆಟ್ಟಣ ಸಮೀಪ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಯಿತು. ಕಡಬ-ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣ ಸಮೀಪದ ಮರದ ಡಿಪೋ ಬಳಿ ಹೆದ್ದಾರಿಗೆ ಎರಡೂ ಮೂರು  ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ಅರಣ್ಯ ಇಲಾಖೆ ತಂಡ ರಸ್ತೆಗೆ ಬಿದ್ದ ಮರ ತೆರವು ಮಾಡಿದರು. ಘಟನೆಯಲ್ಲಿ ಕೆಲವು ವಿದ್ಯುತ್‌ ಕಂಬಗಳಿಗೂ ಹಾನಿಯುಂಟಾಗಿದೆ.
ಕಡಬ, ನೆಟ್ಟಣ, ಬಿಳಿನೆಲೆ, ಸುಬ್ರಹ್ಮಣ್ಯ, ಬಳ್ಪ, ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ, ಗುತ್ತಿಗಾರು ಸಹಿತ ವಿವಿಧೆಡೆ ಬುಧವಾರ ಸಂಜೆ ಮಳೆಯಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಬುಧವಾರ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯ ಕೆಲವು ಕಡೆ ಸಾಧಾರಣ ಮಳೆ ಸುರಿಯುವ ನಿರೀಕ್ಷೆ ಇದೆ. ಮಂಗಳೂರಿನಲ್ಲಿ 32 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.2 ಡಿ.ಸೆ. ಅಧಿಕ ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.7 ಡಿ.ಸೆ. ಏರಿಕೆ ಕಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next