Advertisement
ಮಂಗಳೂರು ನಗರದ ಮತ್ತು ಗ್ರಾಮಾಂತರ ಭಾಗದಲ್ಲಿ ಮುಂಜಾನೆ ವೇಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದ್ದು, ಬಳಿಕ ಕಡಿಮೆಯಾಗಿದೆ. ಪುತ್ತೂರು, ಕಡಬ, ಸುಬ್ರಹ್ಮಣ್ಯ, ಬಂಟ್ವಾಳ ಭಾಗದಲ್ಲಿಯೂ ಬೆಳಗ್ಗೆ – ಸಂಜೆ ವೇಳೆಯಲ್ಲಿ ಉತ್ತಮ ಮಳೆಯಾಗಿದೆ.
Related Articles
ಗಾಳಿ ಮಳೆಯ ಅಬ್ಬರಕ್ಕೆ ವಿದ್ಯುತ್ ಕಂಬ, ತಂತಿಗಳಿಗೆ ಹಾನಿ ಸಂಭವಿಸಿ ಹಲವೆಡೆ ಗಂಟೆಗಟ್ಟಲೇ ವಿದ್ಯುತ್ ವ್ಯತ್ಯಯ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ 151 ವಿದ್ಯುತ್ ಕಂಬಗಳು, 3.13 ಕಿ. ಮೀ. ವಿದ್ಯುತ್ ತಂತಿ, 20 ಪರಿವರ್ತಕಗಳಿಗೆ ಹಾನಿ ಸಂಭವಿಸಿದೆ. ಮೆಸ್ಕಾಂಗೆ ಒಟ್ಟು 25.72 ಲಕ್ಷ ರೂ. ನಷ್ಟವಾಗಿದೆ.
Advertisement
ಬಜಪೆ: ಮರ ಬಿದ್ದು ಹಟ್ಟಿಗೆ,ಸಿಡಿಲು ಬಡಿದು ಮನೆಗೆ ಹಾನಿ
ಬಜಪೆ: ಸೋಮವಾರ ಮೂಡುಶೆಡ್ಡೆ ಗ್ರಾಮದ ಚಂದ್ರಹಾಸ ಶೆಟ್ಟಿ ಅವರ ದನದ ಹಟ್ಟಿಯ ಮೇಲೆ ಮರ ಬಿದ್ದು ಹಟ್ಟಿಗೆ ಹಾನಿ ಗೀಡಾಗಿದೆ. ಗಂಜಿಮಠ ಗ್ರಾ.ಪಂ. ವ್ಯಾಪ್ತಿಯ ಬಡಗುಳಿಪಾಡಿಯ ಕೇಶವ ಅವರ ಮನೆಗೆ ಸೋಮವಾರ ಸಂಜೆ ವೇಳೆಗೆ ಸಿಡಿಲು ಬಡಿದು ತೀವ್ರ ಹಾನಿಯಾಗಿದೆ. ಇಂದು, ನಾಳೆ ಆರೆಂಜ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಮತ್ತು ಬುಧವಾರ ಕರಾವಳಿಗೆ “ಆರೆಂಜ್ ಅಲರ್ಟ್’ ಘೋಷಿಸಿದೆ. 2 ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯ ಎಚ್ಚರಿಕೆ ನೀಡಲಾಗಿದೆ. ಸಮುದ್ರ ಪ್ರಕ್ಷುಬ್ಧ: ಸಮುದ್ರದಲ್ಲಿ ಗಂಟೆಗೆ 35-45 ಕಿ.ಮೀ.ನಿಂದ 55 ಕಿ.ಮೀ. ವರೆಗೆ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ದ.ಕ. ಮತ್ತು ಉಡುಪಿ ಕರಾವಳಿಯಲ್ಲಿ ಜೂ. 11ರ ರಾತ್ರಿ 11.30ರ ವರೆಗಿನ ಮುನ್ಸೂಚನೆಯಂತೆ ಕಡಲು ಪ್ರಕ್ಷುಬ್ಧವಾಗಿರುವ ಸಾಧ್ಯತೆಯಿದ್ದು, 2.0-2.2 ಮೀ. ಎತ್ತರದ ಅಲೆಗಳು ದಡದತ್ತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಳಿಕಾರಿನಲ್ಲಿ ವ್ಯಾಪಕ ಹಾನಿ
ಬೆಳ್ತಂಗಡಿ: ತಾಲೂಕಿನಲ್ಲಿ ಸೋಮವಾರ ಸಂಜೆ ಗಾಳಿ ಸಹಿತ ಭಾರೀ ಮಳೆ ಸುರಿದಿದ್ದು ಧರ್ಮಸ್ಥಳ ಗ್ರಾಮದ ಮುಳಿಕಾರಿನಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಪೆರ್ನ ಮಲೆಕುಡಿಯ ಅವರ ತೋಟದ 50ಕ್ಕೂ ಅಧಿಕ ಅಡಿಕೆ ಮರಗಳು ಮುರಿದಿವೆ. ಮನೆಯ ಸಮೀಪದಲ್ಲಿದ್ದ ದೊಡ್ಡ ಗಾತ್ರದ ಮರಗಳು ಉರುಳಿವೆ. ಮನೆಯ ಹೆಂಚು ಹಾರಿಹೋಗಿದೆ. ಸ್ಥಳೀಯರ ಸಹಕಾರದೊಂದಿಗೆ ಮನೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಬೃಹತ್ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಗಳು ಮುರಿದಿವೆ. ಸಮೀಪದ ಶಂಕರ ಅವರ ಮನೆ ಹಾಗೂ ತೋಟ ಹಾನಿಗೀಡಾಗಿದೆ. ಗಾಳಿಯಿಂದಾಗಿ ಇನ್ನೂ ಹಲವರ ತೋಟಗಳಲ್ಲಿ ಹಾನಿಯಾಗಿದೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.