Advertisement

ಮಲೆನಾಡು, ಕರಾವಳಿಯಲ್ಲಿ ಮತ್ತೆ ಮಳೆಯಬ್ಬರ

06:25 AM Aug 09, 2018 | Team Udayavani |

ಬೆಂಗಳೂರು: ರಾಜ್ಯದ ಕರಾವಳಿ, ಕೊಡಗು, ಮಲೆನಾಡು ಭಾಗದಲ್ಲಿ ಆಶ್ಲೇಷಾ ಮಳೆ ಅಬ್ಬರಿಸುತ್ತಿದೆ. ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಭಾಗಮಂಡಲ ಮತ್ತು ಮಡಿಕೇರಿಯಲ್ಲಿ ರಾಜ್ಯದಲ್ಲಿಯೇ ಅಧಿಕ 11 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.

Advertisement

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆಯಿಂದಲೇ ತುಂತುರು ಮಳೆಯಾಗಿದೆ. ಕೊಡಗಿನಲ್ಲಿ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ವ್ಯಾಪ್ತಿಯ ರಸ್ತೆಗಳು ಜಲಾವೃತಗೊಂಡಿದ್ದು, ಕಕ್ಕಬ್ಬೆ ಹೊಳೆ ಬದಿಯಲ್ಲಿ ರಾತ್ರಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ನೀರಿನಲ್ಲಿ ಮುಳುಗಿತ್ತು. ಮಡಿಕೇರಿ- ಮಂಗಳೂರು ರಸ್ತೆಯ ಒಂದು ಭಾಗ ಸುಮಾರು 300 ಅಡಿಯಷ್ಟು ಆಳಕ್ಕೆ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುವ ಅಪಾಯ ಎದುರಾಗಿದೆ.

ಕರಾವಳಿಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಹೊಸಮಠ ಮುಳುಗು ಸೇತುವೆ ಮುಳುಗಿದೆ. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿನ ನೀರು ಅಪಾಯದ ಮಟ್ಟಕ್ಕೆ ಸನಿಹ ತಲುಪಿದ್ದು, ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ ಯಾತ್ರಿಗಳಿಗೆ ಪುಣ್ಯಸ್ನಾನ ನೆರವೇರಿಸಲು ತೊಡಕುಂಟಾಗಿದೆ. ಧರ್ಮಸ್ಥಳದ ಅಶೋಕನಗರದಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.

ಸಕಲೇಶಪುರ ತಾಲೂಕಿನ ಎಡಕುಮೇರಿ ಶಿರುವಾಗಿಲು ಸಮೀಪ 3 ಕಡೆ ಹಳಿ ಮೇಲೆ ಗುಡ್ಡ ಕುಸಿತಗೊಂಡಿದ್ದು, ಮಂಗಳೂರು-ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿನಿಂದ (ಯಶವಂತಪುರ- ಮಂಗಳೂರು ಜಂಕ್ಷನ್‌- ಕಾರವಾರ-ವಾರದಲ್ಲಿ ಮೂರು ದಿನ ಓಡಾಡುವ ರೈಲು ನಂ: 16515) ಕಡೆಗೆ ಸಂಚರಿಸುವ ರೈಲುಗಳನ್ನು ಹಾಸನ ನಿಲ್ದಾಣದಲ್ಲಿ, ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗಬೇಕಾಗಿದ್ದ ರೈಲನ್ನು ಸುಬ್ರಹ್ಮಣ್ಯ ರೈಲು ನಿಲ್ದಾಣದಲ್ಲಿ ತಡೆ ಹಿಡಿದು ಮಂಗಳೂರಿಗೆ ಹಿಂತಿರುಗಿ ಕಳುಹಿಸಲಾಯಿತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಂಗಾ, ಭದ್ರಾ ಹಾಗೂ ಮಾಲತಿ ನದಿಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್‌ ರಾಜಾಲಖಮಗೌಡಾ ಜಲಾಶಯದಿಂದ ಬುಧವಾರ ಸಂಜೆ ಹತ್ತು ಕ್ರಸ್ಟ್‌ಗೇಟ್‌ಗಳಿಂದ 9 ಸಾವಿರ ಕ್ಯೂಸೆಕ್‌ ನೀರನ್ನು ಹೊರಕ್ಕೆ ಬಿಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next