Advertisement

ಅಬ್ಬರಿಸಿದ ಮಳೆ: ತುಂಬಿ ಹರಿದ ನದಿ; ಸ್ನಾನಘಟ್ಟ ಮುಳುಗಡೆ 

12:55 PM Jul 08, 2018 | |

ಸುಬ್ರಹ್ಮಣ್ಯ : ಶುಕ್ರವಾರ ರಾತ್ರಿಯಿಂದ ಸುಬ್ರಹ್ಮಣ್ಯ ಸುತ್ತಮುತ್ತ ಸುರಿದ ಸತತ ಮಳೆಯಿಂದಾಗಿ ನದಿ, ಉಪನದಿಗಳು ತುಂಬಿದೆ. ಸುಬ್ರಹ್ಮಣ್ಯ ಕುಮಾರಧಾರೆ ಸ್ನಾನಘಟ್ಟವೂ ಮುಳುಗಡೆಯಾಗಿದೆ. ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಹಿತ ಗ್ರಾಮೀಣ ಭಾಗದ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

Advertisement

ಘಟ್ಟ ಮೇಲಿನ ಪ್ರದೇಶ ಹಾಗೂ ಸ್ಥಳೀಯವಾಗಿ ಸುರಿದ ನಿರಂತರ ಮಳೆಯಿಂದಾಗಿ ಕುಮಾರಧಾರೆ ನದಿಯ ನೀರಿನ ಹರಿವು ಹೆಚ್ಚಿದ್ದು, ನದಿ ತುಂಬಿ ಹರಿಯುತ್ತಿದೆ. ಬೆಳಗ್ಗೆ 5 ಗಂಟೆ ಅವಧಿಗೆ ಸ್ನಾನಘಟ್ಟವು ಭಾಗಶಃ ಮುಳುಗಡೆಗೊಂಡಿತ್ತು. ಮಧ್ಯಾಹ್ನ ವೇಳೆಗೆ ಸಂಪೂರ್ಣ ಮುಳುಗಡೆಯಾಯಿತು. ಸ್ನಾನಘಟ್ಟ ಮುಳುಗಡೆಗೊಂಡಿದ್ದರಿಂದ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಸ್ನಾನಘಟ್ಟ ಬಳಿ ದಡದ ಮೇಲ್ಭಾಗದ ನೆರೆ ನೀರಲ್ಲಿ ತೀರ್ಥಸ್ನಾನ ಪೂರೈಸಿಕೊಂಡರು. ತಗ್ಗು ಪ್ರದೇಶದಲ್ಲಿದ್ದ ಈ ಹಿಂದಿನ ಸೇತುವೆ ಮುಳುಗಡೆಗೊಂಡಿತ್ತು. ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚಳಗೊಂಡು ಅಪಾಯದ ಮಟ್ಟದಲ್ಲಿ ಹರಿಯುತ್ತಿತ್ತು. ಸ್ನಾನಘಟ್ಟ ಬಳಿ ಭಕ್ತರು ತೀರ್ಥಸ್ನಾನ ನೆರವೇರಿಸುವ ವೇಳೆ ಅವಘಡ ಸಂಭವಿಸದಂತೆ ಪೊಲೀಸರು ಮತ್ತು ಗೃಹರಕ್ಷಕ ಸಿಬಂದಿ ಮುನ್ನೆಚ್ಚರಿಕೆ ವಹಿಸಿಕೊಂಡಿದ್ದರು. ಸುಬ್ರಹ್ಮಣ್ಯ ಪರಿಸರದ ಹಳ್ಳಕೊಳ್ಳಗಳು ಕೂಡ ತುಂಬಿ ಹರಿದಿದೆ. ನದಿ ದಂಡೆಯ ಬದಿಗಳಲ್ಲಿ ಇರುವ ಕೃಷಿಭೂಮಿ ಬಹುತೇಕ ಜಲಾವೃತಗೊಂಡಿದೆ.

ಸೇತುವೆ ಮುಳುಗಡೆ
ಸುಬ್ರಹ್ಮಣ್ಯ ಹರಿಹರ ಮಾರ್ಗ ಮಧ್ಯೆ ಇರುವ ಗುಂಡಡ್ಕ ಸೇತುವೆ ಬಹಳ ವರ್ಷಗಳ ಬಳಿಕ ಶನಿವಾರ ಮೊದಲ ಬಾರಿಗೆ ಮುಳುಗಿತು. ಮುಖ್ಯ ಸಂಪರ್ಕ ಸೇತುವೆ ಮುಳುಗಿದ್ದರಿಂದ ಈ ಭಾಗಕ್ಕೆ ಸಂಚಾರ ಕಡಿತಗೊಂಡಿತು. ನೆರೆ ನೀರು ಇಳಿಯುವ ತನಕ ಜನರು ಸೇತುವೆ ಸಮೀಪದಲ್ಲಿ ಕಾಯುವ ಸ್ಥಿತಿ ಬಂದಿತ್ತು. ಈ ಭಾಗಕ್ಕೆ ಸಂಪರ್ಕಿಸುವ ಇನ್ನೊಂದು ನಡುಗಲ್ಲು-ಹರಿಹರ ರಸ್ತೆ ಮಧ್ಯೆ ಮಲ್ಲಾರ ಬಳಿ ರಸ್ತೆಗೆ ಮರ ಉರುಳಿ ಬಿದ್ದಿದ್ದು, ಸಂಚಾರಕ್ಕೆ ಅಡ್ಡಿಯುಂಟಾಯಿತು. ಬಾಳುಗೋಡಿನ ಪದಕ, ಕೊಲ್ಲಮೊಗ್ರುವಿನ ಚೊಳುಗೋಳ್‌ ಚೋಡಿ ಸೇತುವೆ ಮುಳುಗಿತ್ತು. ಪಂಜದ ಬೊಳ್ಮಲೆ ಕಿಂಡಿ ಅಣೆಕಟ್ಟು ಮೇಲೆ ನೆರೆ ನೀರು ಹರಿದಿದೆ. ಪಂಜ-ಸುಬ್ರಹ್ಮಣ್ಯ ರಸ್ತೆಯಲ್ಲಿರುವ ಪಂಜದ
ಸೇತುವೆ ಮುಳುಗುವ ಹಂತಕ್ಕೆ ತಲುಪಿತ್ತು. ಹರಿಹರ-ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಬಳ್ಪ, ಏನೆಕಲ್‌, ನಿಂತಿಕಲ್‌, ಬಿಳಿನೆಲೆ, ನೆಟ್ಟಣ ಮೊದಲಾದ ಕಡೆ ನದಿ, ತೊರೆಗಳು ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿನ ಸೇತುವೆ ಮುಳುಗಡೆಗೊಂಡಿದೆ. ತಗ್ಗು ಪ್ರದೇಶ, ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಎಲ್ಲೆಲ್ಲೂ ಕೆರೆಯಂತೆ ಆಗಿದೆ.

ತೆಂಗಿನ ಕಾಯಿ ಹಿಡಿದ ಕಾರ್ಮಿಕರು
ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಬೆಳಗ್ಗೆ ರಜೆ ನೀಡಲಾಗಿತ್ತು. ಇನ್ನು ಈ ಭಾಗದ ಹಲವು ಕಡೆಗಳ ತಗ್ಗು ಪ್ರದೇಶಗಳ ಸೇತುವೆ ಮೇಲೆ ನಿಂತು ಕಾರ್ಮಿಕರು ನೆರೆ ನೀರಿನಲ್ಲಿ ತೇಲಿ ಬರುವ ತೆಂಗಿನ ಕಾಯಿ ಹಿಡಿಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹಲವರು ಸೇತುವೆ ಹಾಗೂ ನೆರೆ ನೀರು ನಿಂತಿರುವ ಪ್ರದೇಶಗಳ ಮುಂದೆ ನಿಂತು ಸೆಲ್ಫಿ ತೆಗೆಯುತ್ತಿದ್ದರು.

ಪ್ರಯಾಣಿಕರಿಗೆ ಭಾರಿ ಸಂಕಷ್ಟ
ಭಾರಿ ಮಳೆಗೆ ಈ ಭಾರಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಕ್ಷೇತ್ರಕ್ಕೆ ಸಂಪರ್ಕಿಸುವ ಉಪ್ಪಿನಂಗಡಿ- ಕಡಬ-ಸುಬ್ರಹ್ಮಣ್ಯ ರಸ್ತೆಯ ನಡುವಿನ ಹೊಸ್ಮಠ ಸೇತುವೆ ಮುಳುಗಡೆಗೊಂಡಿದ್ದರಿಂದ ಈ ಮಾರ್ಗವಾಗಿ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗ ಇಚಿಲಂಪಾಡಿಯಾಗಿ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದವು. ಕುಕ್ಕೆಯಲ್ಲಿ ಜನರು, ಭಕ್ತರು ಭಾರಿ ತೊಂದರೆಗೆ ಒಳಗಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next