ಹೊಸಪೇಟೆ: ನಿರಂತರ ಮಳೆಗೆ ಐತಿಹಾಸಿಕ ಜಂಬುನಾಥನಹಳ್ಳಿಯ ರಾಯರ ಕೆರೆ ಪ್ರದೇಶದ ಕೃಷಿ ಭೂಮಿಗಳು ಜಲಾವೃತವಾಗಿದ್ದು, ನೂರಾರು ಎಕರೆಯಲ್ಲಿ ಬೆಳೆದ ಕಬ್ಬಿನ ಬೆಳೆಗೆ ಹಾನಿ ಸಂಭವಿಸಿದ ಘಟನೆ ಜು. 27ರ ಗುರುವಾರ ನಡೆದಿದೆ.
ಭಾರೀ ಮಳೆ ಬಂದಾಗ ಮಳೆನೀರು ಬೆಳೆಗಳಿಗೆ ನುಗ್ಗುವುದು ವಾಡಿಕೆಯಾಗಿದೆ. ಇದರಿಂದಾಗಿ ಈ ಭಾಗದ ರೈತರು ಸಂಕಷ್ಟಕ್ಕೀಡಾಗುತ್ತಾರೆ.
ತುಂಗಭದ್ರಾ ಜಲಾಶಯದಲ್ಲಿ ಒಂದೇ ದಿನದಲ್ಲಿ 9 ಟಿಎಂಸಿಯಷ್ಟು ನೀರು ಹರಿದು ಬಂದಿದ್ದು, ಸದ್ಯ ಜಲಾಶಯದಲ್ಲಿ 49 ಟಿಎಂಸಿ ನೀರು ಸಂಗ್ರಹವಿದೆ.
ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣ 1 ಲಕ್ಷ ಕ್ಯೂಸೆಕ್ಸ್ ಗಡಿ ದಾಟಿದೆ. ಸದ್ಯ ಜಲಾಶಯಕ್ಕೆ 1 ಲಕ್ಷ 13 ಸಾವಿರದ 981 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಯೊಳಗೆ 1 ಲಕ್ಷದ 15 ಸಾವಿರದ 66 ಕ್ಯೂಸೆಕ್ ನೀರು ಒಳಹರಿವು ಬಂದಿದೆ.
105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 49.760 ಟಿಎಂಸಿ ನೀರು ಸಂಗ್ರಹವಿದೆ.