ಖ್ಯಾಡ (ಬಾಗಲಕೋಟೆ): ತಾಯಿ ಬನವ್ವ, ನಾವೇನ್ ತಪ್ಪ ಮಾಡೀವಿ. ಒಂದ್ ವರ್ಷದಾಗ ಮೂರೂ ಮೂರು ಸಾರಿ ಯಾಕ್ ತ್ರಾಸ್ ಕೊಡಾಕತ್ತಿ… ಬಾದಾಮಿ ತಾಲೂಕಿನ ಚೋಳಚಗುಡ್ಡ ಗ್ರಾ.ಪಂ. ವ್ಯಾಪ್ತಿಯ ಖ್ಯಾಡದ ಜನ ಉತ್ತರಕರ್ನಾಟಕದ ಆರಾಧ್ಯ ದೇವತೆ ಬಾದಾಮಿ-ಬನಶಂಕರಿ ದೇವಿಗೆ ಹೀಗೆ ಕೈಮುಗಿದು ಕೇಳುತ್ತಿದ್ದಾರೆ.
ಎರಡೇ ತಿಂಗಳಲ್ಲಿ ಬರೋಬ್ಬರು ಮೂರು ಬಾರಿ, ಎಲ್ಲಾ ಸಾಮಗ್ರಿ, ಮಕ್ಕಳು, ಆಡು-ಎಮ್ಮೆ ಹೊಡೆದುಕೊಂಡು ಪ್ಲಾಟ್ (ಆಸರೆ ಗ್ರಾಮ)ದಲ್ಲಿದ್ದು ಜೀವ ಉಳಿಸಿಕೊಂಡು, ಮರಳಿ ಊರಿಗೆ ಬರುತ್ತಿದ್ದಾರೆ.
ರಾಡಿ ನೋಡ್ರಿ: ಖ್ಯಾಡ ಗ್ರಾಮಕ್ಕೆ ಮಲಪ್ರಭಾ ನದಿ ಮೂರು ಬಾರಿ ನುಗ್ಗಿದೆ. ಹಳೆಯ ಊರಿಗೆ ನುಗ್ಗಿದಾಗೊಮ್ಮೆ, ರಾಶಿ ರಾಶಿ ರಾಡಿ ತಂದು ಬಿಟ್ಟಿದೆ. ಮನೆಗಳ ಒಳಗೆ, ಹೊಸ್ತಿಗಳು ರಾಡಿಯಿಂದ ತುಂಬಿಕೊಂಡಿದೆ. ಕಳೆದ ಆಗಸ್ಟನಲ್ಲಿ ಬಂದ ಪ್ರವಾಹದಿಂದ ಇಡೀ ಗ್ರಾಮಕ್ಕೆ ನೀರು ನುಗ್ಗಿತ್ತು.
ಮನೆಗಳಲ್ಲಿನ ಹಾಸಿಗೆ, ಹೊದಿಕೆ, ಧವಸ-ಧಾನ್ಯ ಎಲ್ಲವೂ ಹಾನಿಯಾಗಿತ್ತು. ಇದೀಗ ಪುನಃ ಕಟ್ಟಿಕೊಳ್ಳಲು ಹೈರಾಣಾಗುತ್ತಿರುವಾಗಲೇ ಮತ್ತೆ ನೀರು ಹೊಕ್ಕಿದೆ.ಇದರಿಂದ ಕಂಗಾಲಾಗಿರುವ ಜನರು, ತಾಯಿ ಬನವ್ವ ನಾವೇನ್ ತಪ್ಪ ಮಾಡೀವಿ ಎಂದು ಅಸಹಾಯಕರಂತೆ ಕೇಳುತ್ತಿದ್ದಾರೆ.
ಬದುಕಿನ ಬಂಡಿ ನೀರಲ್ಲ: 2011ರ ಜನಗಣತಿ ಪ್ರಕಾರ ಗ್ರಾಮದಲ್ಲಿ 2015 ಜನಸಂಖ್ಯೆ ಇದೆ. ಅದರಲ್ಲಿ 1012 ಪುರುಷರು, 1003 ಮಹಿಳೆಯರು ಒಳಗೊಂಡಿದ್ದು, ಸುಮಾರು 400 ಕುಟುಂಬಗಳಿವೆ. ಬಹುತೇಕ ರೈತ ಕುಟುಂಬಗಳೇ ಇಲ್ಲಿದ್ದು, ಕಲ್ಲು ಮಣ್ಣಿನ ಮೇಲುಮುದ್ದೆಯ ಮನೆಗಳಿವೆ. 327.84 ಹೆಕ್ಟೇರ್ ನೀರಾವರಿ, 285.76 ಹೆಕ್ಟೇರ್ ಮಳೆಯಾಶ್ರಿತ ಸೇರಿ ಒಟ್ಟು 613.60 ಹೆಕ್ಟೇರ್ ಸಾಗುವಳಿ ಭೂಮಿ ಇದೆ. ಬಾದಾಮಿ ಚಾಲುಕ್ಯರ ಅರಸರ ಕಾಲದಲ್ಲಿ ಆಯುಧಗಳನ್ನು ಇಡಲು ಈ ಗ್ರಾಮ ಬಳಕೆಯಾಗುತ್ತಿತ್ತು ಎಂಬುದು ಇತಿಹಾಸದ ಪುಟಗಳು ಹೇಳುತ್ತವೆ. ಆಗ ಆಯುಧಗಳನ್ನು ಇಡುತ್ತಿದ್ದ ಗ್ರಾಮದಲ್ಲೀಗ, ರೈತನ ಆಯುಧಗಳು (ಎತ್ತಿನ ಬಂಡಿ, ಕೃಷಿ ಚಟುವಟಿಕೆಯ ಸಾಮಗ್ರಿ) ನೀರಿನಲ್ಲಿ ನಿಂತಿವೆ. ರೈತನ ಬದುಕಿಗೆ ಈ ಸಾಮಗ್ರಿಗಳೇ ಬದುಕಿನ ಬಂಡಿ ಸಾಗಲು ಆಯುಧಗಳು. ಅವು ನಿರಂತರ ನೀರಿನಲ್ಲಿ ನೆನೆದಿರುವುದರಿಂದ ಬಳಕೆ ಮಾಡಲಾಗದ ಸ್ಥಿತಿ ತಲುಪಿವೆ.
-ಶ್ರೀಶೈಲ ಕೆ. ಬಿರಾದಾರ