ಬೆಳಗಾವಿ: ಈ ವರ್ಷದ ಅತಿಯಾದ ಮಳೆ ಮತ್ತು ನದಿಗಳ ಪ್ರವಾಹ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಾಕಷ್ಟು ಹಾನಿ ಉಂಟುಮಾಡಿದೆ. ಕೃಷಿ ಕ್ಷೇತ್ರದ ಜೊತೆಗೆ ಮೂಲಭೂತ ಸೌಕರ್ಯಗಳಿಗೂ ಇದರ ಪರಿಣಾಮ ಬೀರಿದೆ. ಶೈಕ್ಷಣಿಕ ಕ್ಷೇತ್ರ ಸಹ ಇದರಿಂದ ಹೊರತಾಗಿಲ್ಲ.
ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ನದಿಗಳ ಪ್ರವಾಹದಿಂದ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಮೊದಲೇ ಅನುದಾನದ ಕೊರತೆಯಿಂದ ಬಳಲುತ್ತಿರುವ ಶಾಲೆಗಳು ಈಗ ಕೊಠಡಿಗಳ ದುರಸ್ತಿ ವಿಷಯದಲ್ಲಿ ಮತ್ತಷ್ಟು ಸಮಸ್ಯೆಗೆ ತುತ್ತಾಗಿವೆ. ಇದು ಮಕ್ಕಳ ಶಿಕ್ಷಣದ ಮೇಲೆಯೂ ಪರಿಣಾಮ ಬೀರಿದೆ.
ಶಾಲಾ ಕೊಠಡಿಗಳು ಕುಸಿದು ಬಿದ್ದಿರುವುದರಿಂದ ಜಿಲ್ಲೆಯ ಬಹುತೇಕ ಕಡೆ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಿರುವುದು ಎದ್ದುಕಾಣುತ್ತದೆ. ಕೆಲವು ಕಡೆ ಕೊಠಡಿಗಳ ಕೊರತೆಯಿಂದ ಒಂದು ಕಡೆ ಎರಡೆರಡು ತರಗತಿ ಮಕ್ಕಳನ್ನು ಕೂಡಿಸಿದ್ದರೆ ಇನ್ನು ಕೆಲವು ಕಡೆ ಶಾಲೆಯ ಕಚೇರಿಯಲ್ಲಿ ಮಕ್ಕಳನ್ನು ಕೂಡಿಸಿ ತರಗತಿ ನಡೆಸಲಾಗುತ್ತಿದೆ. ಮೊದಲೇ ಕೊಠಡಿಗಳ ಕೊರತೆ ಎದುರಿಸುತ್ತಿರುವ ಶಾಲೆಗಳಲ್ಲಿ ಇದು ಇನ್ನಷ್ಟು ಸಮಸ್ಯೆ ಹೆಚ್ಚಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ನೆರೆ ಅಧ್ಯಯನ ತಂಡಕ್ಕೆ ಶಿಕ್ಷಣ ಇಲಾಖೆಯ ಮಾಹಿತಿಯಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 676 ಶಾಲೆಗಳು ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 296 ಶಾಲೆಗಳು ಮಳೆಯಿಂದ ತೊಂದರೆಗೆ ಒಳಗಾಗಿವೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಳೆಯಿಂದ 727 ಶಾಲಾ ಕೊಠಡಿಗಳು ಕುಸಿದು ಬಿದ್ದಿದ್ದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 676 ಶಾಲೆಗಳ 1559 ಕೊಠಡಿಗಳು ದುರಸ್ತಿಯ ಅನಿವಾರ್ಯತೆಯಲ್ಲಿವೆ. ಈ ಜಿಲ್ಲೆಯಲ್ಲಿ
ಕಾಗವಾಡ ತಾಲೂಕು ಹೊರತುಪಡಿಸಿದರೆ ಉಳಿದ ಏಳು ತಾಲೂಕುಗಳಲ್ಲಿ 100 ಕ್ಕೂ ಹೆಚ್ಚು ಕೊಠಡಿಗಳು ಮಳೆಯಿಂದ ಬಾಧಿತವಾಗಿರುವುದು ಗಮನಿಸಬೇಕಾದ ಸಂಗತಿ. ಅದರಲ್ಲಿ ಅತೀ ಹೆಚ್ಚು ಅಂದರೆ ಮೂಡಲಗಿ ತಾಲೂಕಿನಲ್ಲಿ 360 ಶಾಲಾ ಕೊಠಡಿಗಳು ಮಳೆಯಿಂದ ಹಾನಿಗೊಳಗಾಗಿವೆ. ಹುಕ್ಕೇರಿ ತಾಲೂಕಿನಲ್ಲಿ 284 ಶಾಲಾ ಕೊಠಡಿಗಳು ಮಳೆಗೆ ತುತ್ತಾಗಿವೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಳೆಯಿಂದ ಅಂದಾಜು 3008.75 ಲಕ್ಷ ರೂ ದಷ್ಟು ಹಾನಿಯಾಗಿದೆ. ಆದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಅನುದಾನ (ಎನ್‌ಡಿಆರ್‌ಎಫ್) ದಡಿ ಪ್ರತಿ ಶಾಲೆಗೆ 2 ಲಕ್ಷ ರೂ. ದಂತೆ 1352 ಲಕ್ಷ ರೂ ದೊರೆಯಲಿದೆ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಹೇಳಿಕೆ. ಅದೇ ರೀತಿ ಬೆಳಗಾವಿ ಶೆ„ಕ್ಷಣಿಕ ಜಿಲ್ಲೆಯಲ್ಲಿ 727 ಶಾಲೆಗಳ ದುರಸ್ತಿಗೆ 11.84 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಇದಲ್ಲದೆ 287 ಶಾಲೆಗಳಲ್ಲಿ ಹೊಸದಾಗಿ 622 ಕೊಠಡಿಗಳ ನಿರ್ಮಾಣಕ್ಕಾಗಿ ಸಹ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆ.
ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ತಿ ಸಂಬಂಧ ಈಗಾಗಲೇ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮೇಲಾಗಿ ಪ್ರವಾಹದಿಂದ ತೊಂದರೆಗೆ ಒಳಗಾದ ಪ್ರತಿ ಶಾಲೆಗೆ ಎನ್‌ಡಿಆರ್‌ಎಫ್ ದಡಿ ಎರಡು ಲಕ್ಷ ರೂ. ಲಭ್ಯವಾಗಲಿದೆ. ಸರಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆ ಕೊಠಡಿಗಳ ದುರಸ್ತಿ ಮತ್ತು ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು.
ಬಸವರಾಜ ನಾಲವತವಾಡ,
ಬೆಳಗಾವಿ ಉಪನಿರ್ದೇಶಕರು
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 676 ಶಾಲೆಗಳಲ್ಲಿ ಮಳೆಯಿಂದ ಕೊಠಡಿಗಳು ಹಾಳಾಗಿವೆ. ಕೆಲವು ಕಡೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶಾಲಾ ಕೊಠಡಿಗಳ ದುರಸ್ತಿ ಮತ್ತು ಹೊಸ ಕೊಠಡಿಗಳ ನಿರ್ಮಾಣದ ಕುರಿತು ಕ್ರಿಯಾ ಯೋಜನೆ ರೂಪಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಇದಲ್ಲದೆ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ನೆರೆ ಅಧ್ಯಯನ ತಂಡಕ್ಕೆ ಸಹ ಪ್ರಸ್ತಾವನೆ ನೀಡಲಾಗಿದೆ.
ಮೋಹನ ಹಂಚಾಟೆ, ಚಿಕ್ಕೋಡಿ
ಉಪನಿರ್ದೇಶಕರು
*ಕೇಶವ ಆದಿ