Advertisement

ಭಾರೀ ಮಳೆಗೆ ನೆಲ ಕಚ್ಚಿದ ಬೆಳೆ-ಜನರಿಗೆ ಆತಂಕ

04:31 PM May 23, 2022 | Team Udayavani |

ಮೊಳಕಾಲ್ಮೂರು: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪಟ್ಟಣ ಹಾಗೂ ತಾಲೂಕಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಬಿರುಗಾಳಿ ಸಹಿತದ ಮಳೆಯಿಂದ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಪಪ್ಪಾಯಿ ಹಾಳಾಗಿದೆ. ಇನ್ನುಳಿದ ಕಡೆ ತರಕಾರಿ, ಬಾಳೆ ಹಾಗೂ ಇನ್ನಿತರ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಕರಡಿಹಳ್ಳಿ ಗ್ರಾಮದಲ್ಲಿ ವಾಸದ ಮನೆಯೊಂದಕ್ಕೆ ಭಾಗಶಃ ಹಾನಿಯಾಗಿದೆ. ಮಳೆಯಿಂದ ಪಟ್ಟಣ ಹಾಗೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿರುವ ಹಳೆ ಮನೆಗಳು, ಶಾಲಾ-ಕಾಲೇಜು ಹಾಗೂ ಕಚೇರಿಗಳ ಕಟ್ಟಡಗಳು ಕುಸಿಯುವ ಆತಂ ಎದುರಾಗಿದೆ. ರಸ್ತೆಗಳಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರ ಸಮಸ್ಯೆ ಉಂಟಾಗಿದೆ. ಮೊಳಕಾಲ್ಮೂರು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ.

ಮಳೆಯಿಂದ ವ್ಯಾಪಾರ ವಹಿವಾಟು ಕುಂಠಿತಗೊಂಡು ವ್ಯಾಪಾರಸ್ಥರಿಗೆ ಸಮಸ್ಯೆ ತಂದೊಡ್ಡಿದೆ. ತಾಲೂಕಿನಲ್ಲಿ ಕೂಲಿ ಕೆಲಸವನ್ನೇ ನಂಬಿಕೊಂಡು ಬದುಕುತ್ತಿರುವ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸವಿಲ್ಲದೆ ಜೀವನ ನಡೆಸಲು ಪರದಾಡುವಂತಾಗಿದೆ. ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯಲ್ಲಿನವರ ಮನೆಗಳನ್ನು ತೆರವು ಮಾಡಿದ್ದರಿಂದ ಅಳಿದುಳಿದ ಮನೆಗಳಲ್ಲೇ ಜನರು ವಾಸಿಸುತ್ತಿದ್ದಾರೆ. ಆದರೆ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಭರವಸೆಗಳನ್ನು ಮಾತ್ರ ನೀಡುತ್ತಿವೆ. ಈವರೆಗೂ ಯಾವೊಬ್ಬ ಜನಪ್ರತಿನಿಧಿಗಳು ಸೂಕ್ತ ಪರ್ಯಾಯ ಮಾರ್ಗದ ಬಗ್ಗೆ ಚಕಾರ ಎತ್ತುತ್ತಿಲ್ಲ. ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೊಳಕಾಲ್ಮೂರು ಪಟ್ಟಣ ಹಾಗೂ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಬಹುತೇಕ ಗ್ರಾಮಗಳ ರಸ್ತೆಗಳು ಹಾಳಾಗಿದ್ದು ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಪಟ್ಟಣದಲ್ಲಿ ನಡೆಯುವ ರಸ್ತೆ ಕಾಮಗಾರಿಯಿಂದ ಮನೆ ಕಳೆದುಕೊಂಡವರಿಗೆ ಈವರೆಗೂ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಪರಿಹಾರ ನೀಡದೆ ಸುಳ್ಳು ಭರವಸೆ ನೀಡುತ್ತಿವೆ. -ಆರ್‌. ರವಿಚಂದ್ರ, ರಾಷ್ಟ್ರೀಯ ವಾಲ್ಮೀಕಿ ನಾಯಕ ಮಹಾವೇದಿಕೆ ರಾಜ್ಯಾಧ್ಯಕ್ಷ

Advertisement

ಮಳೆಯಿಂದ ಬಡವರ ಜೀವನ ಅಸ್ತವ್ಯಸ್ತಗೊಂಡಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಜನಸಾಮಾನ್ಯರಿಗೆ ಯಾವುದೇ ಅನಾಹುತವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. -ಎಂ. ರಾಮಾಂಜನೇಯ, ಕರ್ನಾಟಕ ನವನಿರ್ಮಾಣ ಸೇನಾ ಸಮಿತಿ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next