ಹೊಸದಿಲ್ಲಿ: ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಆರಂಭವಾದ ದಿಢೀರ್ ಮಳೆಯು ರಾಷ್ಟ್ರರಾಜಧಾನಿಯಾದ್ಯಂತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬುಧವಾರ ಬೆಳಕು ಹರಿಯುತ್ತಿದ್ದಂತೆಯೇ ತಗ್ಗುಪ್ರದೇಶಗಳು ಹಾಗೂ ರಸ್ತೆಗಳೆಲ್ಲ ಜಲಾವೃತವಾಗಿ, ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಆಗಿ, ಜನರ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಕೆಲವೇ ಗಂಟೆಗಳ ಮಳೆಯು ಇಡೀ ದಿಲ್ಲಿಯನ್ನೇ ಹೈರಾಣಾಗಿಸಿತು. ರಸ್ತೆಗಳೆಲ್ಲ ನದಿಗಳಂತೆ ಗೋಚರವಾದವು. ಬುಧವಾರ ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ದಿಲ್ಲಿಯ ಮಳೆ, ಟ್ರಾಫಿಕ್ ಜಾಮ್, ಜಲಾವೃತವಾದ ಪ್ರದೇಶಗಳ ಫೋಟೋಗಳೇ ಹರಿದಾಡತೊಡಗಿದವು.
ಗಾಜಿಯಾಬಾದ್, ಗುರ್‌ಗಾಂವ್, ನೋಯ್ಡಾದಲ್ಲೂ ಭಾರೀ ಮಳೆಯು ಅನೇಕ ಅಪಾರ ಹಾನಿ ಮಾಡಿದೆ. ದಿಲ್ಲಿಯ ಸಾಕೇತ್ ಪ್ರದೇಶದಲ್ಲಿ ಶಾಲೆಯ ಕಾಂಪೌಂಡ್ ಗೋಡೆ ಕುಸಿತದ ಕಾರಣ, ಹಲವು ವಾಹನಗಳಿಗೆ ಹಾನಿಯಾಗಿದೆ. ನಂಗ್ಲೋಯಿಯಲ್ಲಿ ಮನೆ ಯೊಂದು ಕುಸಿದುಬಿದ್ದಿದೆ. ಆಗ್ರಾದಲ್ಲೂ ಹಳೇ ಮನೆ ಕುಸಿದಿದೆ.
ಗುರುವಾರ ದಿಲ್ಲಿ, ಒಡಿಶಾ, ಆಂಧ್ರ ಕರಾವಳಿ, ರಾಜಸ್ಥಾನ, ಪಂಜಾಬ್, ಹರಿಯಾಣ, ಉ.ಪ್ರದೇಶ, ಬಿಹಾರ, ಕರ್ನಾಟಕ, ಕೇರಳ, ಹಿಮಾಚಲ ಪ್ರದೇಶಗಳಲ್ಲಿ ಭಾರೀ ಮಳೆಯಾ ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪಂಚಗಂಗಾ ನೀರಿನ ಮಟ್ಟ ಏರಿಕೆ: ಧಾರಾಕಾರ ಮಳೆಯಿಂದಾಗಿ ಮಹಾರಾಷ್ಟ್ರದ ಕೊಲ್ಲಾಪುರದ ಪಂಚಗಂಗಾ ನದಿ ಅಪಾಯದ ಮಟ್ಟವನ್ನು ಸಮೀಪಿಸಿದೆ. ಈ ಹಿನ್ನೆಲೆಯಲ್ಲಿ ರಾಧಾನಗರಿ ಡ್ಯಾಂನಿಂದ 4,256 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.
ಸಂಚಾರಕ್ಕೆ ತಡೆ: ಉತ್ತರಾಖಂಡದಲ್ಲಿ ಮಂಗಳ ವಾರ ರಾತ್ರಿ ಸುರಿದ ಧಾರಾಕಾರ ಮಳೆ ಯಿಂದಾಗಿ ಅನೇಕ ರಸ್ತೆಗಳು ಬ್ಲಾಕ್ ಆಗಿವೆ. ರುದ್ರಪ್ರಯಾಗ ಜಿಲ್ಲೆಯ ಭಿರ್ ಮತ್ತು ಬನ್ಸ್ ವಾಡಾದಲ್ಲಿ ಭೂಕುಸಿತ ಗುಡ್ಡ ಜರಿದು, ರಸ್ತೆಯ ಮೇಲೆ ಬಿದ್ದಿದೆ. ಹೀಗಾಗಿ ಕೇದಾರನಾಥ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇನ್ನು ಉತ್ತರಕಾಶಿ ದಿಲ್ಲೆಯ ದಬಾರ್‌ಕೋಟ್‌ನಲ್ಲೂ ಭೂಕುಸಿತ ಉಂಟಾದ ಕಾರಣ, ಯಮುನೋತ್ರಿಗೆ ಹೋಗುರ ರಸ್ತೆ ಬಂದ್ ಆಗಿದೆ.