Advertisement

ಕರಾವಳಿ, ಮಲೆನಾಡಿನಲ್ಲಿ ಅಬ್ಬರಿಸಿದ ಮಳೆರಾಯ

09:35 AM Aug 07, 2019 | Team Udayavani |

ಮಣಿಪಾಲ: ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವಾರು ಕಡೆ ಹಾನಿ ಸಂಭವಿಸಿದೆ. ಗಾಳಿ ಸೇರಿದಂತೆ ಬಿರುಸಾಗಿ ಮಳೆ ಬೀಸುತ್ತಿದ್ದು ರಸ್ತೆ ಸಂಚಾರ, ಜನಜೀವನ ಅಸ್ತವ್ಯಸ್ಥವಾಗಿದೆ.

Advertisement

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗಗಳಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಹಲವಾರು ಕಡೆಗಳಲ್ಲಿ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡ ಘಟನೆಗಳು ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಇನ್ನೆರಡು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಹೆಬ್ರಿ; ಸೋಮೇಶ್ವರ ,ಚಾರ ಕುಚ್ಚೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಗಾಳಿ ಮಳೆ ಹಲವೆಡೆ ಕೃಷಿಭೂಮಿ ಜಲಾವೃತ ಚರಂಡಿ ಇಲ್ಲದೆ ರಸ್ತೆಯಲ್ಲಿ ನೀರು ಹರಿದು ಸಂಚಾರಕ್ಕೆ ತಡೆಯಾಯಿತು.

ಭಾಗಮಂಡಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲದಲ್ಲಿ ಕಾವೇರಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ – ನಾಪೋಕ್ಲು ಮತ್ತು ಭಾಗಮಂಡಲ – ಮಡಿಕೇರಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Advertisement

ಕುಕ್ಕೆ: ಕುಮಾರಾಧಾರ ನದಿಯ ಪ್ರವಾಹ ಹೆಚ್ಚಾದ ಪರಿಣಾಮ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸ್ನಾನ ಘಟ್ಟ ಮುಳುಗಡೆಯಾಗಿದೆ.

ಚಾರ್ಮಾಡಿ: ಘಾಟಿಯ 7ನೇ ತಿರುವಿನಲ್ಲಿ ಬೆಳಗ್ಗೆ  ಮರವೊಂದು ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ಥವಾಗಿತ್ತು. ಚಾರ್ಮಾಡಿ ಹಸನಬ್ಬರ ತಂಡ ಸ್ಥಳಕ್ಕೆ ಧಾವಿಸಿ ಮರತೆರವಿಗೆ ಸಹಕರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.

ಉಡುಪಿ: ಭಾರಿ ಗಾಳಿಗೆ ಮಿಶನ್‌ ಕಂಪೌಂಡ್‌ ಬಳಿ ವಿದ್ಯುತ್‌ ಕಂಬವೊಂದು ರಸ್ತೆಗೆ ಉರುಳಿ ಬಿದ್ದಿತ್ತು. ತಾಲೂಕು ಪಂಚಾಯತ್‌ ಆವರಣದಲ್ಲಿ ಮರದ ಗೆಲ್ಲೊಂದು ರಿಕ್ಷಾದ ಮೇಲೆ ಬಿದ್ದು ಆತಂಕ ಸೃಷ್ಟಿಯಾಗಿತ್ತು.

ಕುಂದಾಪುರ: ಗುಡ್ಡಟ್ಟು ವಿನಾಯಕ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಪೂಜೆ ಮುಗಿಸಿ ಹೊರ ಬರುವಾಗ ಎಲ್ಲಾ ಭಕ್ತರ ಚಪ್ಪಲಿ ಮತ್ತು ಕೂಡೆ ನೀರಲ್ಲಿ ಕೊಚ್ಚಿ ಹೋಗಿತ್ತು .ವಿಪರೀತ ಮಳೆ ಒಂದೆಡೆಯಾದರೆ ವಾರಾಹಿ D- 25 ಕಾಲುವೆಯ ಕೊನೆ ಭಾಗದ ನೀರು ದೇವಸ್ಥಾನದ ಬಲ ಭಾಗದಲ್ಲಿ ಹರಿದು ಬಂದಿರುವುದೇ ಕಾರಣ.

ತೆಕ್ಕಟ್ಟೆ: ಕೆದೂರಿನಲ್ಲಿ ಮಳೆಗೆ ರೈಲ್ವೆ ಟ್ರಾಕ್ ಮುಳುಗಿದ ಕಾರಣ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಸುಮಾರು ಒಂದು ಗಂಟೆಗಳ ಕಾಲ ನಿಲ್ಲಿಸಲಾಯಿತು.‌ ನೆರೆ ನೀರು ಇಳಿದ ಬಳಿಕ ರೈಲು ಪ್ರಯಾಣ ಮುಂದುವರಿಸಿತು.

ಕಾಪು : ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಕಾಪು ಸುತ್ತಮುತ್ತ ಭಾರೀ ಹಾನಿಯುಂಟಾಗಿದೆ. ಹಲವಾರು ಮನೆಗಳ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಹೊಸ್ಮಾರು: ಇಲ್ಲಿನ ಬಲ್ಯೊಟ್ಟುವಿನಲ್ಲಿ ಮಂಗಳವಾರ ನಡೆಯಬೇಕಾಗಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟಕ್ಕೆ ಮಳೆ ಅಡಚಣೆ ಉಂಟುಮಾಡಿತು.

ತೊಕ್ಕೊಟ್ಟು ಜಂಕ್ಷನ್ ನ ವೃಂದಾವನ ಹೋಟೆಲ್, ಸುಳ್ಯ ನಗರದ ಜಟ್ಟಿಪಳ್ಳ ತಿರುವು ರಸ್ತೆ ಬಳಿ ಹೋಟೆಲ್ ಗೆ ನೀರು ನುಗ್ಗಿದೆ.

ಸುಳ್ಯ ತಾಲೂಕಿನ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ ವಠಾರಕ್ಕೆ ಮಳೆ ಪರಿಣಾಮ ಜಲಾವೃತಗೊಂಡಿದೆ. ನೀರಿನ ಪ್ರಮಾಣ ಏರಿಕೆ ಆಗುತ್ತಿದೆ.

ಶೃಂಗೇರಿ: ಶೃಂಗೇರಿಯಲ್ಲಿ ಭಾರಿ ಮಳೆಯಿಂದಾಗಿ ನೆರೆ ಭೀತಿ ಉಂಟಾಗಿದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಶಾರದಾಂಭೆ ಮಠದ ಆವರಣದಲ್ಲಿವ ಕಪ್ಪೆ ಶಂಕರ ದೇವಾಲಯ , ಸ್ನಾನಘಟ್ಟ ಮುಳುಗಡೆಯಾಗಿದೆ.

ಪಳ್ಳಿ: ಕಲ್ಯಾ ಅಶೋಕ್‌ ನಗರ ನಿವಾಸಿ ಸುಮಿತ್ರ ಹೆಗ್ಡೆ ಅವರ ಮನೆಗೆ ಮರ ಬಿದ್ದು ಹಾನಿಯುಂಟಾಗಿ ಸುಮಾರು 10 ಸಾವಿರ ರೂ. ನಷ್ಟ ಸಂಭಸಿದೆ. ಗಿರಿಜಾ ಶೆಟ್ಟಿಗಾರ್‌ ಅವರ ಮನೆಗೂ ಹಾನಿಯುಂಟಾಗಿದ್ದು ಸುಮಾರು 15 ಸಾವಿರ ರೂ. ನಷ್ಟ ಸಂಭಸಿದೆ. ಚೈತ್ರಾ ಶೆಟ್ಟಿಗಾರ್‌ ಅವರ ಮನೆಗೆ ಭಾಗಶಃ ಹಾನಿಯುಂಟಾಗಿ ಸುಮಾರು 10 ಸಾವಿರ ರೂ. ನಷ್ಟ ಸಂಭಸಿದೆ. ಅಶೋಕ್‌ ನಗರ ಸುಂದರಿ ಸಫ‌ಳಿಗರವರ ಮನೆಯ ಹಂಚು ಹಾರಿ ಹೋಗಿದ್ದು ಸುಮಾರು 12 ಸಾವಿರ ರೂ. ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next