ಉಡುಪಿ: ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದಂತೆ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳವಾರ ಉಡುಪಿ ಜಿಲ್ಲೆಯ ಬ್ರಹ್ಮಾವರ, ಕುಂದಾಪುರ ಭಾಗಗಳಲ್ಲಿ ಬಿಡದೆ ಮಳೆ ಸುರಿಯುತ್ತಿದೆ. ಕಳೆದೆರಡು ದಿನಗಳಿಂದ ಬಿಟ್ಟು ಬಿಡದೆ ಮಳೆಯಾಗುತ್ತಿರುವ ಕಾರಣ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಂಪರ್ಕ ಕಡಿತವಾಗಿದೆ.
ಸೀತಾ, ಸವರ್ಣ ನದಿಗಳಲ್ಲಿ ಪ್ರವಾಹೋಪಾದರಿಯಲ್ಲಿ ನೀರು ಹರಿಯುತ್ತಿದ್ದು, ಸಮೀಪದ ಪ್ರದೇಶಗಳು ಜಲಾವೃತಗೊಂಡಿದೆ. ನಾವುಂದ, ಸಾಲ್ಬುಡ, ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಅರೆಹೊಳೆ ಭಾಗದ ಜನರು ಜಲ ದಿಗ್ಭಂಧನಕ್ಕೆ ಒಳಗಾಗಿದ್ದಾರೆ.
ಕೋಟ ಭಾಗದಲ್ಲಿ ದೊಡ್ಡ ಪ್ರಮಾಣದ ನೆರೆ ಹಾನಿ ಉಂಟಾಗಿದೆ. ಸಂಸದರು, ಎ.ಸಿ, ಡಿ.ಸಿ ಭೇಟಿ ನೀಡಿದ್ದಾರೆ. ಹಲವೆಡೆ ರಸ್ತೆಗಳ ಮೇಲೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ.
ಹಾಲಾಡಿಯ ಮದೂರಿಗೆ ಸಂಪರ್ಕ ಸಾಧಿಸುವ ಚೋರಾಡಿ ಬರಣಕೊಳಕಿ ಸೇತುವೆ ಕುಸಿದು ಬಿದ್ದಿದ್ದು, ಗ್ರಾಮಗಳ ನಡುವಿನ ಸಂಪರ್ಕ ಕಡಿದಿದೆ.
ಕೋಟ ಸಾಹೇಬ್ರಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಹಲವು ದಶಕದಲ್ಲೇ ಮೊದಲ ಬಾರಿಗೆ ದಿನವಿಡೀ ಸಂಪರ್ಕ ಕಡಿತವಾಗಿದೆ.